ADVERTISEMENT

ದ್ವೇಷ ಅಳಿಸಿ, ದೇಶ ಉಳಿಸಿ: ಕಾದಂಬರಿಕಾರ ಬಿ.ಎಲ್‌.ವೇಣು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 13:38 IST
Last Updated 22 ಡಿಸೆಂಬರ್ 2019, 13:38 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಪ್ರೊ.ಬಸವರಾಜ್‌ ಟಿ.ಬೆಳಗಟ್ಟ, ಕಾದಂಬರಿಕಾರ ಬಿ.ಎಲ್‌.ವೇಣು, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಪ್ರಾಧ್ಯಾಪಕ ಡಾ.ಕೆ.ಕಮಾನಿ ಪಾಲ್ಗೊಂಡಿದ್ದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಪ್ರೊ.ಬಸವರಾಜ್‌ ಟಿ.ಬೆಳಗಟ್ಟ, ಕಾದಂಬರಿಕಾರ ಬಿ.ಎಲ್‌.ವೇಣು, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಪ್ರಾಧ್ಯಾಪಕ ಡಾ.ಕೆ.ಕಮಾನಿ ಪಾಲ್ಗೊಂಡಿದ್ದರು.   

ಚಿತ್ರದುರ್ಗ: ಪ್ರೀತಿಯ ಮಳೆ ಸುರಿಯಬೇಕಿದ್ದ ಸ್ಥಳದಲ್ಲಿ ಗುಂಡಿನ ಮಳೆ ಸುರಿಸಲಾಗಿದೆ. ವೋಟ್‌ಬ್ಯಾಂಕ್‌ ರಾಜಕಾರಣಕ್ಕೆ ಹಲವರು ಬಲಿಯಾಗಿದ್ದಾರೆ. ದ್ವೇಷ ಅಳಿಸಿ, ದೇಶ ಉಳಿಸುವ ತುರ್ತು ಎದುರಾಗಿದೆ. ಜಾತಿ ನಾಶಪಡಿಸಿ ಪ್ರೀತಿಯನ್ನು ಹಂಚುವ ಅಗತ್ಯವಿದೆ ಎಂದು ಕಾದಂಬರಿಕಾರ ಬಿ.ಎಲ್‌.ವೇಣು ಸಲಹೆ ನೀಡಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಸಮಾನತೆ ಮತ್ತು ಪರಿಸರ ಜಾಗೃತಿ ವೇದಿಕೆ ಭಾನುವಾರ ಏರ್ಪಡಿಸಿದ್ದ ‘ನಮ್ಮ ದೇಶ ಮತ್ತು ನಾವು’ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ದೇಶ ಗಲಭೆಯ ಗೂಡಾಗಿ ಪರಿವರ್ತನೆ ಹೊಂದುತ್ತಿದೆ. ಕೋಮುಭಾವನೆ ಕದಡುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಭಾರತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಆರ್ಥಿಕ ಕುಸಿತ, ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ರೈತರ ಆತ್ಮಹತ್ಯೆ, ಅತ್ಯಾಚಾರ ಹಾಗೂ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ದೇಶದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಮಾತುಕೊಟ್ಟು ಅಧಿಕಾರಕ್ಕೆ ಬಂದವರು ಭರವಸೆ ಈಡೇರಿಸಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ದೇಶಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಇರುವ ಉದ್ಯೋಗಗಳನ್ನೇ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುತ್ತೇನೆಂದು ಆಶ್ವಾಸನೆ ನೀಡಿದ್ದರು. ನನ್ನ ಬ್ಯಾಂಕ್‌ ಖಾತೆಗೆ ಇನ್ನೂ ಹಣ ಬಂದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮೂಢನಂಬಿಕೆ, ಕಂದಾಚಾರ, ಜಾತಿಯನ್ನು ಟೀಕಿಸಿ ಗೆದ್ದವರು 12ನೇ ಶತಮಾನದ ಶರಣರು. ಅವರು ಗೆದ್ದಿರುವ ಕಾರಣಕ್ಕೆ ಈಗಲೂ ನಮ್ಮ ನಡುವೆ ಉಳಿದಿದ್ದಾರೆ. 16ನೇ ಶತಮಾನದಲ್ಲಿ ಬಂದ ದಾಸರು ಕೂಡ ಇದೇ ದಾರಿಯಲ್ಲಿ ನಡೆದರು. ಪಂಪನಿಂದ ಕುವೆಂಪು ವರೆಗೆ ಎಲ್ಲರೂ ಮಾನವೀಯತೆ ಪ್ರತಿಪಾದನೆ ಮಾಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕವಿಗೆ ಬಂಡಾಯದ ಗುಣದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಟ್ವಿಟರ್‌, ಫೇಸ್‌ಬುಕ್‌ನಂತಹ ಪ್ರಬಲ ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಕಾವ್ಯ ಜೀವಂತವಾಗಿ ಇರುವುದು ಸಂತಸದ ಸಂಗತಿ. ಕಾವ್ಯ ಆತ್ಮತೃಪ್ತಿ ನೀಡುತ್ತದೆ. ಸಮೂಹ ಮಾಧ್ಯಮದ ಮೂಲಕ ಇನ್ನಷ್ಟು ಜನರನ್ನು ಕಾವ್ಯ ತಲುಪಬೇಕು. ಆಗ ಪ್ರತಿಭೆಗೂ ಮನ್ನಣೆ ದೊರೆಯುತ್ತದೆ’ ಎಂದು ಹೇಳಿದರು.

‘ಲಲಿತಕಲಾ ಪ್ರಕಾರವಾದ ಕಾವ್ಯ ರಸಾನುಭವದ ಜೊತೆಗೆ ವಿವೇಕ ನೀಡುತ್ತದೆ. ಸದಾ ಎಚ್ಚರದಿಂದ ಇರುವ ಪ್ರಜ್ಞೆ ಮೂಡಿಸುತ್ತದೆ. ರಾಜಾಶ್ರಯದಲ್ಲಿದ್ದ ಸಾಹಿತ್ಯ ಜನಸಾಮಾನ್ಯರ ಬಳಿಗೆ ಬಂದಿದೆ. ಶ್ರೀಮಂತವಾಗಿರುವ ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ’ ಎಂದರು.

ಲೇಖಕ ಆನಂದಕುಮಾರ್‌, ಪ್ರಾಧ್ಯಾಪಕರಾದ ಡಾ.ಕೆ.ಕಮಾನಿ, ಪ್ರೊ.ಬಸವರಾಜ್‌ ಟಿ.ಬೆಳಗಟ್ಟ, ಡಾ.ಸಂಜೀವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.