ADVERTISEMENT

ಕೆರೆಯಾಗಳಮ್ಮ ದೇವಿ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 6:48 IST
Last Updated 8 ಜನವರಿ 2023, 6:48 IST
ಹೊಸದುರ್ಗದ ದೇವಪುರದಲ್ಲಿ ಶನಿವಾರ ಕೆರೆಯಾಗಳಮ್ಮ ದೇವಿ ರಥೋತ್ಸವ ನಡೆಯಿತು
ಹೊಸದುರ್ಗದ ದೇವಪುರದಲ್ಲಿ ಶನಿವಾರ ಕೆರೆಯಾಗಳಮ್ಮ ದೇವಿ ರಥೋತ್ಸವ ನಡೆಯಿತು   

ಹೊಸದುರ್ಗ: ಇಲ್ಲಿನ ದೇವಪುರದ ಗ್ರಾಮದೇವತೆ ಕೆರೆಯಾಗಳಮ್ಮ ದೇವಿ ರಥೋತ್ಸವ ಶನಿವಾರ ನಸುಕಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಶೂನ್ಯ ಮಾಸ ವಿರಾಮದ ಮಾಸವಿದ್ದಂತೆ. ಈ ಮಾಸದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಆದರೆ ಇದೇ ಮಾಸದ ಜನವರಿ ತಿಂಗಳಲ್ಲಿ ರಥೋತ್ಸವ ಮಾಡಿಸಿಕೊಳ್ಳುವ ಏಕೈಕ ದೇವತೆ ಕೆರೆಯಾಗಳಮ್ಮ ದೇವಿ.

ಜಾತ್ರೋತ್ಸವಕ್ಕೂ ಮುನ್ನ ಸಮೀಪದ ಹೊನ್ನೇನಹಳ್ಳಿಯಲ್ಲಿ ದೇವಿಗೆ ನಡೆಯುವ ಆರತಿ ಭಾನೋತ್ಸವವು ಗಮನ ಸೆಳೆಯಿತು. ರಥೋತ್ಸವಕ್ಕೂ ಮುನ್ನ ದೇವಿಯು ಸುತ್ತಲಿನ ನಾಗತಿಹಳ್ಳಿ, ಮಸಣಿಹಳ್ಳಿ, ಕೋಡಿಹಳ್ಳಿ, ಯಲ್ಲಾಭೋವಿಹಟ್ಟಿ, ಮೂಡ್ಲಭೋವಿಹಟ್ಟಿ, ದೇವರಹಟ್ಟಿ, ಬೋಚೇನಹಳ್ಳಿ, ಬೆನಕನಹಳ್ಳಿ, ನರಸೀಪುರ ಗ್ರಾಮಗಳಿಗೆ ಸೆಳೆ (ಸುತ್ತಲಿನ ಗ್ರಾಮಗಳಿಗೆ ತೆರಳಿ ಭಕ್ತರಿಂದ ಸೇವೆ ಸ್ವೀಕರಿಸುವುದು) ಹೋಗುವುದು ಇಲ್ಲಿನ ವಿಶೇಷ.

ADVERTISEMENT

ರಥೋತ್ಸವದ ಅಂಗವಾಗಿ ಸೋಮವಾರದಿಂದ ದೇವಪುರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದವು. ಗುರುವಾರ ಕೇಲು ಭಾನೋತ್ಸವ ನಡೆಯಿತು. ಶುಕ್ರವಾರ ಗ್ರಾಮಸ್ಥರೆಲ್ಲಾ ಮನೆ ಶುಚಿಗೊಳಿಸಿಕೊಂಡು ಸಿಹಿ ಅಡುಗೆ ಮಾಡಿ, ತೇರಿಗೆ ಎಡೆ ಹಿಡಿದರು. ನಂತರ ಶನಿವಾರ ಬೆಳಿಗ್ಗೆ 5ಕ್ಕೆ ದೇವಿ ರಥ ಏರಿತು. ಸೋಮ (ಚೋಮ) ಕುಣಿತವು ವಿಶೇಷವಾಗಿದ್ದು, ನೋಡುಗರ ಗಮನ ಸೆಳೆಯಿತು.

‘ಜಾತ್ರಾ ಮಹೋತ್ಸವದ ಆರಂಭವಾದಾಗಿನಿಂದ ದೇವಪುರಕ್ಕೆ ಭಕ್ತರ ದಂಡೆ ಬರುತ್ತದೆ. ಅದರಲ್ಲೂ ವಿಶೇಷವಾಗಿ ದೇವಪುರದಿಂದ ಮದುವೆಯಾಗಿ ಹೋಗಿರುವ ಪ್ರತಿಯೊಬ್ಬ ಹೆಣ್ಣು ಮಗಳೂ ರಥೋತ್ಸವಕ್ಕೆ ಬಂದು, ದೇವಿಗೆ ಮಂಗಳಾರತಿ ಮಾಡಿಸಿ, ಮಡಿಲಕ್ಕಿ ನೀಡುವುದು ಸಂಪ್ರದಾಯ. ವಿವಿಧ ಹರಕೆ ಫಲಿಸಿದ ಭಕ್ತರು ರಥೋತ್ಸವಕ್ಕೆ ಬಂದು ರಥೋತ್ಸವ ನಡೆಯುವ ಸಂದರ್ಭದಲ್ಲಿ ರಥಕ್ಕೆ ಬಾಳೆಹಣ್ಣು, ಮೆಣಸು ಮತ್ತು ನಾಣ್ಯ ಅರ್ಪಿಸುತ್ತಾರೆ. ಅಮ್ಮನವರು ರಥ ಏರಿದರೆ ಶೂನ್ಯ ಮಾಸ ಮುಗಿದಂತೆ. ನಂತರ ಶುಭ ಕಾರ್ಯಗಳು ಜರುಗುತ್ತವೆ’ ಎನ್ನುತ್ತಾರೆ ದೇವಪುರದ ಮೇಘನಾ.

ರಥೋತ್ಸವದಲ್ಲಿ ಸುತ್ತಲಿನ ಗ್ರಾಮಸ್ಥರು, ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಅಪಾರ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.