ADVERTISEMENT

ಚಿತ್ರದುರ್ಗ: ಕ್ರೀಡಾ ಸ್ಫೂರ್ತಿ ಮೆರೆದ ಹಿರಿಯ ನಾಗರಿಕರು

ವಿವಿಧ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗಿ, ಸೌಲಭ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:45 IST
Last Updated 21 ಸೆಪ್ಟೆಂಬರ್ 2025, 7:45 IST
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು   

ಚಿತ್ರದುರ್ಗ: ಇಳಿವಯಸ್ಸಿನಲ್ಲೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ಹಿರಿಯ ನಾಗರಿಕರು ಕ್ರೀಡಾ ಸ್ಫೂರ್ತಿ ಮೆರೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ವಯಸ್ಸು ದೇಹಕ್ಕಷ್ಟೇ, ಮನಸ್ಸಿಗಲ್ಲ ಎಂಬ ಸತ್ಯವನ್ನು ಅನಾವರಣಗೊಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯರ ಉತ್ಸಾಹ ಗಮನ ಸೆಳೆಯಿತು.

ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆದವು. ಓಟ, ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್‌ ಎಸೆಯುವುದು ಮುಂತಾದ ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಭಾಗವಹಿಸಿದರು. ಪ್ರತಿ ಸ್ಪರ್ಧೆಯಲ್ಲೂ ಸೋಲು– ಗೆಲುವು ಲೆಕ್ಕಿಸದೇ ಭಾಗಿಯಾಗಿ ಮಾದರಿಯಾದರು. ಸಾಂಸ್ಕೃತಿಕ ಸ್ಪರ್ಧೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡರು. ಗಾಯನ, ಏಕ ಪಾತ್ರಾಭಿನಯ ಸ್ಪರ್ಧೆಗಳು ಗಮನ ಸೆಳೆದವು.

ADVERTISEMENT

‘ನ್ಯಾಯಾಲಯಗಳು ಹಿರಿಯ ನಾಗರಿಕರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡು ಇತ್ಯರ್ಥಪಡಿಸುತ್ತವೆ. ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ದೂರು ಸಲ್ಲಿಸಲು ಕಷ್ಟವಾದರೆ ಉಚಿತ ಸಹಾಯವಾಣಿ (15100) ಮೂಲಕ ಕರೆ ಅಥವಾ ಸಂದೇಶ ಕಳುಹಿಸಬಹುದು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

‘ಜಿಲ್ಲಾ ಮಟ್ಟದಲ್ಲಿ ಉಪವಿಭಾಗಾಧಿಕಾರಿ, ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆಯ ಹೊಣೆ ಹೊತ್ತಿರುತ್ತಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೀವರಕ್ಷಣೆ ಮಾಡುವಲ್ಲಿ ಉಪವಿಭಾಗಾಧಿಕಾರಿ ಉತ್ತಮ ಕೆಲಸ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ನ್ಯಾಯಾಲಯ, ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ ಸದಾ ಬದ್ಧವಾಗಿದೆ’ ಎಂದರು.

‘ಹಿರಿಯ ನಾಗರಿಕರು ಉತ್ತಮ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. ಬದುಕಿನ ಜಂಜಾಟಗಳನ್ನು ತೊರೆದು 60 ವರ್ಷದ ನಂತರದ ನಿವೃತ್ತಿ ಜೀವನವನ್ನು ಸುಖದಿಂದ ಕಳೆಯಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್ವರಪ್ಪ ಹೇಳಿದರು.

‘ವಯಸ್ಸು ಇದ್ದಾಗ ಹಣ ಹಾಗೂ ಸಂಪತ್ತಿನ ಅಭಿಲಾಷೆ ಹೊಂದಿರುತ್ತೇವೆ. ಆದರೆ ಇಳಿ ವಯಸ್ಸಿನಲ್ಲಿ ಉತ್ತಮ ಆರೋಗ್ಯ ಹೊಂದಬೇಕು. ದೇವರು ನಮ್ಮ ಇಚ್ಛೆಗಳನ್ನು ಪೂರೈಸುವುದರೊಂದಿಗೆ ಆರೋಗ್ಯ ತೊಂದರೆಗಳನ್ನೂ ಕರುಣಿಸುತ್ತಾನೆ. ಆದ್ದರಿಂದ ಸಂಪತ್ತಿನ ಬದಲಿಗೆ ನಾವೆಲ್ಲರೂ ಉತ್ತಮ ಆರೋಗ್ಯವನ್ನು ಬೇಡಿಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಹಾಗೂ ಹಿರಿಯ ನಾಗರಿಕರ ರಕ್ಷಣಾ ಮಂಡಳಿ ಅಧ್ಯಕ್ಷ ಮೆಹಬೂಬ್ ಜಿಲಾನಿ ಖುರೇಷಿ ಅಭಿಪ್ರಾಯಪಟ್ಟರು. 

‘ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಹಿರಿಯ ನಾಗರಿಕರಿಗೆ ದೊರಕಿಸಿಕೊಡಲಾಗುತ್ತಿದೆ. ಯಾವುದೇ ಸಮಸ್ಯೆಗಳಿದ್ದರೂ ಹಿರಿಯ ನಾಗರಿಕರು ನಮ್ಮ ಕಚೇರಿ ಸಂಪರ್ಕಿಸಬಹುದು’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ಉಚಿತ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ್ ಕುಮಾರ್, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ದಿಲ್‍ಶಾದ್ ಉನ್ನೀಸಾ, ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ, ನಿಕಟಪೂರ್ವ ಅಧ್ಯಕ್ಷ ರಂಗಪ್ಪ ರೆಡ್ಡಿ ಇದ್

- ರಾಜ್ಯದಲ್ಲೇ ಮೊದಲ ಸಲಹಾ ಕೇಂದ್ರ ‘

ಹಿರಿಯ ನಾಗರಿಕರಿಗೆ ಸರ್ಕಾರದ ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಲು ರಾಜ್ಯದಲ್ಲೇ ಮೊದಲ ಹಿರಿಯ ನಾಗರಿಕರ ಸಲಹಾ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ’ ಎಂದು ಎಂ.ವಿಜಯ್ ಹೇಳಿದರು. ‘ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಲೋಕಾಯುಕ್ತ ಕಚೇರಿ ಹಿಂಭಾಗದಲ್ಲಿ ಸಲಹಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಸಲಹಾ ಕೇಂದ್ರ ಕೆಲಸ ನಿರ್ವಹಿಸಬೇಕು. ಹಿರಿಯರ ಯಾವುದೇ ಸಮಸ್ಯೆಗಳಿದ್ದರೂ ಶೀಘ್ರಗತಿಯಲ್ಲಿ ಇತ್ಯರ್ಥಪಡಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.