ADVERTISEMENT

ಕೊಟ್ಟೂರು: ಜನಪದ ಕಲೆಗಳು ಜನರ ಜೀವನದ ಸೆಲೆ :ಬಿ. ಮಂಜಮ್ಮ ಜೋಗತಿ

ತರಳಬಾಳು ಹುಣ್ಣಿಮೆ: ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:01 IST
Last Updated 4 ಫೆಬ್ರುವರಿ 2023, 5:01 IST
ಕೊಟ್ಟೂರಿನ ತರಳಬಾಳು ಹುಣ್ಣಿಮೆಯಲ್ಲಿ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿದರು
ಕೊಟ್ಟೂರಿನ ತರಳಬಾಳು ಹುಣ್ಣಿಮೆಯಲ್ಲಿ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿದರು   

ಕೊಟ್ಟೂರು: ನಾನು ಕಾಲೇಜು ಮೆಟ್ಟಿಲು ಹತ್ತದಿದ್ದರೂ ನನ್ನ ಬದುಕಿನ ಕುರಿತು ಕಾಲೇಜು ವಿದ್ಯಾರ್ಥಿಗಳು ಓದುವಂತೆ ನನ್ನ ಜೀವನ ರೂಪಿಸಿದ್ದು ಜನಪದ ಕಲೆ ಎಂದು ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಪಟ್ಟಣದ ತರಳಬಾಳು ಹುಣ್ಣಿಮೆಯ 7ನೇ ದಿನವಾದ ಶುಕ್ರವಾರ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‌ ಗೀಳಿಗೆ ಒಳಗಾಗಿದ್ದಾರೆ. ಇವರಲ್ಲಿ ಪಾಲಕರು ವಚನ ಸಾಹಿತ್ಯ, ಕೃತಿಗಳು, ಗ್ರಂಥಗಳನ್ನು ಓದುವ ಆಸಕ್ತಿ ಬೆಳೆಸಬೇಕು.

ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಾಮಾಜಿಕ ಪ್ರಜ್ಞೆ, ಸಹಕಾರ, ಸಹಬಾಳ್ವೆ ಮತ್ತು ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ. ಆದ್ದರಿಂದ ಸರ್ಕಾರಿ ಮತ್ತು ಮಠದ ಶಾಲೆಗಳಲ್ಲಿ ಓದಿಸುವಂತೆ ಪಾಲಕರಿಗೆ ತಿಳಿಸಿದರು.

ADVERTISEMENT

ಗದಗ ಶಾಸಕ ಎಚ್.ಕೆ.ಪಾಟೀಲ್, ಬಸವಣ್ಣನವರ ವಚನಗಳ ಸಂದೇಶಗಳನ್ನು ತಿಳಿದು, ಅವುಗಳಲ್ಲಿ
ರುವ ಮೌಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಂಡು, ಹೆಣ್ಣು ಎಂಬ ಭೇದವಿಲ್ಲದ ಸಮಾಜ ನಿರ್ಮಾಣವಾಗಬೇಕು ಎಂದರು.

‘ಬಸವಣ್ಣ ಮತ್ತು ಮೂಢನಂಬಿಕೆ’ ವಿಷಯ ಕುರಿತು ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಅಸಂಖ್ಯಾತ ದೇವರುಗಳನ್ನು ನಂಬದೆ, ಕಾಯಕವೇ ದೇವರೆನ್ನಬೇಕು. ಇಂದು ಸುಶಿಕ್ಷಿತ ಸಮಾಜ ನಿರ್ಮಾಣವಾಗಿದೆ ಎಂದರೆ ಅದು ವಿರಕ್ತ ಮಠಗಳಿಗೆ ಸಿಗಬೇಕಾದ ಗೌರವ ಎಂದರು.

ವಿಜಯನಗರ ಸಾಮ್ರಾಜ್ಯದ ವೈಭವ ಕುರಿತು ಕು. ಜೆ.ಎನ್.ನಮಿತಾ ಮಾತನಾಡಿದರು. ಪದ್ಮಶ್ರೀ ಸಾಲು ಮರದ ತಿಮ್ಮಕ್ಕ, ಸಂಸದ ವೈ.ದೇವೇಂದ್ರಪ್ಪ, ಶಾಸಕ ಎಲ್.ಬಿ.ಪಿ. ಭೀಮನಾಯ್ಕ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಧಾಪಕ ರಾಮನಾಯ್ಕ, ಸಂಡೂರಿನ ಕೆ.ಎಸ್.ನಾಗರಾಜ್, ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಬಿ.ಡಿ.ಕುಂಬಾರ್, ದಾವಣಗೆರೆ ಎಸ್.ಎಸ್.ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ್ ಮಾತನಾಡಿದರು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಬೆಂಗಳೂರಿನ ಪ್ರಹ್ಲಾದ್ ಆಚಾರ್ಯ ಇವರಿಂದ ನೆರಳಿನಾಟ ಹಾಗೂ ಮಾತನಾಡುವ ಗೊಂಬೆ ಪ್ರದರ್ಶಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಚರ್ಚೆಗೆ ಗ್ರಾಸವಾದ ಪಲ್ಲಕ್ಕಿ ಉತ್ಸವ

ತರಳಬಾಳು ಹುಣ್ಣಿಮೆಯ ಪ್ರಯುಕ್ತ ಫೆ.5ರಂದು ಸಿರಿಗೆರೆ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಪಲ್ಲಕ್ಕಿ ಉತ್ಸವ ಸ್ಥಗಿತಗೊಳಿಸಬೇಕೆಂದು ಕಟ್ಟೆಮನೆ ದೈವಸ್ಥರು ಕಳೆದ ಮಂಗಳವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಫೆ.16ರಂದು ನಡೆಯಲಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಜ.26ರಂದು ಸ್ವಾಮಿಯ ರಥದ ತೇರು ಗಡ್ಡೆಯನ್ನು ಹೊರ ಹಾಕಿ, ಅಂದಿನಿಂದಲೇ ಧಾರ್ಮಿಕ ಆಚರಣೆಗಳು ಪ್ರಾರಂಭವಾಗಿವೆ. ಈ ಅವಧಿಯಲ್ಲಿ ಸಂಪ್ರದಾಯದಂತೆ ಯಾವುದೇ ಧಾರ್ಮಿಕ ಉತ್ಸವ, ಮೆರವಣಿಗೆ, ಅಡ್ಡ ಪಲ್ಲಕ್ಕಿ ಉತ್ಸವಗಳು ನಡೆದು ಬಂದ ಪದ್ಧತಿ ಊರಿನಲ್ಲಿ ಇಲ್ಲ. ಆದ್ದರಿಂದ ನಮ್ಮೂರಿನ ಸಂಪ್ರದಾಯಕ್ಕೆ ಚ್ಯುತಿಯಾಗುವುದು ಬೇಡ ಎಂಬುದು ಕಟ್ಟೆಮನಿ ದೈವಸ್ಧರ ವಾದ.

ತರಳಬಾಳು ಹುಣ್ಣಿಮೆಯ ಕೊನೆಯ ದಿನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಸಿಕೊಂಡು ಬಂದಿರುವುದು ನಮ್ಮ ಸಂಪ್ರದಾಯವಾಗಿದೆ. ಈ ಪದ್ಧತಿ ಮುರಿಯುವಂತಿಲ್ಲ ಎಂಬುದು ಹುಣ್ಣಿಮೆಯ ಸ್ವಾಗತ ಸಮಿತಿಯ ಪದಾಧಿಕಾರಿಗಳ ವಾದ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಗುರುವಾರ ಸಂಜೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕಟ್ಟೆಮನಿ ದೈವದವರು ಹಾಗೂ ಹುಣ್ಣಿಮೆ ಸಮಿತಿಯವರು ತಮ್ಮ ನಿಲುವು ಬಿಟ್ಟುಕೊಡದ ಕಾರಣ ಈವರೆಗೂ ಒಮ್ಮತದ ನಿರ್ಣಯ ಮೂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.