ADVERTISEMENT

ತರಕಾರಿ ಮಾರಾಟಗಾರರ ಪುತ್ರಿ ಅಧಿಕಾರಿ

ಸರ್ಕಾರಿ ಶಾಲೆ – ಕಾಲೇಜಿನಲ್ಲಿ ಅಭ್ಯಾಸ, ಮೂರನೇ ಬಾರಿ ಯಶಸ್ಸು

ಜಿ.ಬಿ.ನಾಗರಾಜ್
Published 24 ಡಿಸೆಂಬರ್ 2019, 19:31 IST
Last Updated 24 ಡಿಸೆಂಬರ್ 2019, 19:31 IST
ತಂದೆ ಮಂಜುನಾಥಪ್ಪ ತಾಯಿ ಜಯಮ್ಮ ಅವರೊಂದಿಗೆ ವಿನೋದಮ್ಮ
ತಂದೆ ಮಂಜುನಾಥಪ್ಪ ತಾಯಿ ಜಯಮ್ಮ ಅವರೊಂದಿಗೆ ವಿನೋದಮ್ಮ   

ಚಿತ್ರದುರ್ಗ: ಊರಿಂದೂರಿಗೆ ಅಲೆದು ಸಂತೆಯಲ್ಲಿ ತರಕಾರಿ ಮಾರಾಟ ಮಾಡುವವರ ಪುತ್ರಿ ಖಜಾನೆ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಪಡೆದು ಯಶಸ್ಸು ಗಳಿಸಿದ ಎಂ.ವಿನೋದಮ್ಮ ಯುವ ಮನಸುಗಳಿಗೆ ಸ್ಫೂರ್ತಿಯಾಗಿದ್ದಾರೆ.

ಹಿರಿಯೂರು ತಾಲ್ಲೂಕಿನ ಧರ್ಮಪುರದ ಮಂಜುನಾಥಪ್ಪ ಮತ್ತು ಜಯಮ್ಮ ದಂಪತಿಯ ದ್ವಿತೀಯ ಪುತ್ರಿ ವಿನೋದಮ್ಮ. ಶಿರಾ ತಾಲ್ಲೂಕಿನ ಬೆಜ್ಜಿಹಳ್ಳಿಯ ದಂಪತಿ 25 ವರ್ಷಗಳ ಹಿಂದೆ ವಾಸಸ್ಥಾನವನ್ನು ಧರ್ಮಪುರಕ್ಕೆ ಬದಲಿಸಿದ್ದರು. ತರಕಾರಿ ಮಾರಾಟ ಮಾಡುತ್ತ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೆಡ್ತೂರು ಮೊರಾರ್ಜಿ ವಸತಿ ಶಾಲೆಯಲ್ಲಿ ವಿನೋದಮ್ಮ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಸ್ಸಿ ನರ್ಸಿಂಗ್‌ ಪದವಿ ಪಡೆದಿದ್ದಾರೆ. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕೆಲಸ ಮಾಡುತ್ತ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಯಶಸ್ಸು ಕಂಡಿದ್ದಾರೆ.

ADVERTISEMENT

ವಿನೋದಮ್ಮ ಪ್ರತಿಭಾವಂತ ವಿದ್ಯಾರ್ಥಿ. ಪಿಯು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರು. ವೈದ್ಯಕೀಯ ಶಿಕ್ಷಣಕ್ಕೆ ಸೀಟು ಕೂಡ ಸಿಕ್ಕಿತ್ತು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ವೈದ್ಯಕೀಯ ಶಿಕ್ಷಣ ಪಡೆಯುವಷ್ಟು ಉತ್ತಮವಾಗಿರಲಿಲ್ಲ. ಉಚಿತ ಪ್ರವೇಶ ಹಾಗೂ ವಸತಿ ವ್ಯವಸ್ಥೆ ಇರುವ ಶಿಕ್ಷಣ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಇವರ ಮುಂದಿತ್ತು. ಹೀಗಾಗಿ, ವೈದ್ಯಕೀಯ ಶಿಕ್ಷಣದ ಆಸೆಯನ್ನು ಬದಿಗಿಟ್ಟು, ಅರೆವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು.

‘ಶಿಕ್ಷಕ ಸ್ವಾಮಿ ಅವರ ಸ್ಫೂರ್ತಿದಾಯಕ ಮಾತುಗಳು ಸಾಧನೆಗೆ ನೆರವಾದವು. ವೈದ್ಯ, ಎಂಜಿನಿಯರ್‌ ಆಗುವುದಕ್ಕಿಂತ ಆಡಳಿತಾತ್ಮಕ ಸೇವೆಗೆ ತೆರಳುವಂತೆ ಒತ್ತಿ ಹೇಳುತ್ತಿದ್ದರು. ಹೀಗಾಗಿ, ಆರಂಭದಿಂದಲೂ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಮೂಡಿತ್ತು’ ಎಂದು ಸಂತಸ ಹಂಚಿಕೊಂಡರು ವಿನೋದಮ್ಮ.

ವಿನೋದಮ್ಮ ಅವರಿಗೆ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ತರಕಾರಿ ಮಾರಾಟ ಮಾಡಿ ಬರುತ್ತಿದ್ದ ಆದಾಯದಲ್ಲಿ ಕುಟುಂಬ ನಡೆಸುವುದು ಮಂಜುನಾಥ ಅವರಿಗೆ ಕಷ್ಟವಾಗಿತ್ತು. ಉಚಿತ ಶಿಕ್ಷಣ ಸಿಗುವ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದರು. ಪೋಷಕರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮಕ್ಕಳು ವ್ಯಾಸಂಗ ಮಾಡಿದ್ದಾರೆ. ಮೊದಲ ಪುತ್ರಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಮತ್ತೊಬ್ಬ ಪುತ್ರಿ ಗೀತಮ್ಮ ಎಂ.ಟೆಕ್‌ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದಾರೆ. ಕಿರಿಯ ಪುತ್ರ ಶಾಂತರಾಜು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘2011 ಹಾಗೂ 2014ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. ಮುಖ್ಯ ಪರೀಕ್ಷೆ ಬರೆದರೂ ಸಂದರ್ಶನದ ಅವಕಾಶ ಕೈತಪ್ಪಿತ್ತು. ಸ್ನೇಹಿತರ ಸಲಹೆ ಮೇರೆಗೆ ತರಬೇತಿ ಪಡೆಯಲು ಆರಂಭಿಸಿದೆ. ಕಾರ್ಮಿಕ ಇಲಾಖೆ, ಪಂಚಾಯಿತಿ ರಾಜ್‌ ಇಲಾಖೆಯ ಅಧಿಕಾರಿ ಆಗಬೇಕು ಎಂಬ ಹಂಬಲವಿತ್ತು. ಬಡತನದಲ್ಲಿ ಬೆಳೆದಿದ್ದರಿಂದ ಸಾಮಾನ್ಯರಿಗೆ ಸೇವೆ ಸಲ್ಲಿಸುವ ಇಚ್ಛೆ ಇತ್ತು’ ಎನ್ನುತ್ತಾರೆ ವಿನೋದಮ್ಮ.

33 ವರ್ಷದ ವಿನೋದಮ್ಮ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಏಕೈಕ ಉದ್ದೇಶದಿಂದ ವೈವಾಹಿಕ ಜೀವನಕ್ಕೆ ಕಾಲಿಡಲು ಹಿಂದೇಟು ಹಾಕಿದ್ದರು. ಛಲಬಿಡದ ಅವರ ಸಾಧನೆಗೆ ಕುಟುಂಬ ಹಾಗೂ ಸಂಬಂಧಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.