ADVERTISEMENT

ಜಲ ಜಾಗೃತಿಗೆ ಜಲಾನಯನ ಮಾದರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 15:16 IST
Last Updated 16 ಅಕ್ಟೋಬರ್ 2018, 15:16 IST
ತೋಟಗಾರಿಕಾ ಬೆಳೆಗಳಿಗೆ ಔಷಧ ಸಿಂಪಡಿಸಲು ತಯಾರಿಸಿದ ಡ್ರೋಣ್‌ ಮಾದರಿಯ ಯಂತ್ರ
ತೋಟಗಾರಿಕಾ ಬೆಳೆಗಳಿಗೆ ಔಷಧ ಸಿಂಪಡಿಸಲು ತಯಾರಿಸಿದ ಡ್ರೋಣ್‌ ಮಾದರಿಯ ಯಂತ್ರ   

ಚಿತ್ರದುರ್ಗ: ಬೆಟ್ಟದ ಮೇಲೆ ಬೀಳುವ ಮಳೆನೀರು ಹರಿದು ಕಾಲುವೆ ಸೇರುತ್ತದೆ. ಹಳ್ಳ–ಕೊಳ್ಳದ ಮೂಲಕ ಹಾದು ಕೆರೆ ತಲುಪುತ್ತದೆ. ಕೆರೆಯ ಸಮೀಪದ ಕೃಷಿ ಹೊಂಡ ಸದಾ ತುಂಬಿರುತ್ತದೆ. ಪಕ್ಕದಲ್ಲೇ ಇರುವ ಜಮೀನಿನಲ್ಲಿ ಬೆಳೆ ನಳನಳಿಸುತ್ತಿದ್ದರೆ ಯಾವ ರೈತ ಖುಷಿಯಾಗಿರುವುದಿಲ್ಲ ಹೇಳಿ?

ಇಂತಹದೊಂದು ‘ಮಾದರಿ ಜಲಾನಯನ ಪ್ರದೇಶ’ ಮುರುಘಾ ಮಠದ ಕೃಷಿ ಮೇಳದಲ್ಲಿ ಮಂಗಳವಾರ ಕಂಡು ಬಂದಿತು. ‘ಓಡುವ ನೀರನ್ನು ನಡೆಸಬೇಕು; ನಡೆಯುವ ನೀರನ್ನು ಇಂಗಿಸಬೇಕು’ ಎಂಬ ಪರಿಕಲ್ಪನೆಯಲ್ಲಿ ಕೃಷಿ ಇಲಾಖೆ ರೂಪಿಸಿದ ಮಾದರಿ ರೈತರ ಮನಗೆದ್ದಿತು.

200 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 5 ಸಾವಿರ ಹೆಕ್ಟೇರ್‌ ಜಲಾನಯನ ಪ್ರದೇಶದ ಮಾದರಿಯನ್ನು 10 ಅಡಿಯ ಮಳಿಗೆಯಲ್ಲಿ ನಿರ್ಮಿಸಲಾಗಿದೆ. ಚೆಕ್‌ಡ್ಯಾಂ, ಬದು, ಹೊಂಡಗಳ ಪ್ರಯೋಜನಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ದನದ ಕೊಟ್ಟಿಗೆ, ತೋಟ, ರಸ್ತೆ, ಮನೆ ಸೇರಿ ಎಲ್ಲವೂ ಪರಿಸರ ಸ್ನೇಹಿಯಾಗಿವೆ. ಮಳೆ ನೀರನ್ನು ಹಿಡಿದಿಡುವ ಬಗೆಯನ್ನು ಇದು ಮನವರಿಕೆ ಮಾಡಿಕೊಡುತ್ತದೆ.

ADVERTISEMENT

ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ತೋಟಗಾರಿಕೆ ಮಾಡುವ ಬಗೆಯನ್ನು ತೋಟಗಾರಿಕೆ ಇಲಾಖೆ ತೋರಿಸಿಕೊಟ್ಟಿತು. ಕಡಿಮೆ ನೀರಿನಲ್ಲಿ ಬೆಳೆಯುವ ನಿಂಬೆ, ಕರಿಬೇವು, ಮಾವು, ನುಗ್ಗೆಯಿಂದ ಆಗುವ ಪ್ರಯೋಜನವನ್ನು ರೈತರಿಗೆ ತಿಳಿಸಿಕೊಡಲಾಗುತ್ತಿದೆ. ಬಹುಬೆಳೆ ಪದ್ಧತಿಯ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಡಿಕೆ, ತೆಂಗು ಸಸಿ ನೆಡಲು ಬಳಸುವ ಯಂತ್ರ, ರೇಷ್ಮೆ ಹುಳು ಸಾಕಣೆಗೆ ಬಳಸುವ ಚಾಕಿ, ಸಬ್ಸಿಡಿ ಮಾಹಿತಿ ಫಲಕಗಳು ರೈತರ ಗಮನ ಸೆಳೆದವು.

ಭದ್ರಾ ಮೇಲ್ದಂಡೆ ಯೋಜನೆಯ ಕುರಿತು ರೈತರಿಗೆ ಮಾಹಿತಿ ನೀಡುವ ಮಳಿಗೆಗೆ ತಂತ್ರಜ್ಞಾನದ ಸ್ಪರ್ಶ ನೀಡಲಾಗಿತ್ತು. ಯೋಜನೆಯ ಸಂಪೂರ್ಣ ನೀಲನಕ್ಷೆ, ಸುರಂಗ ಮಾರ್ಗದ ಕಾಮಗಾರಿ, ನಾಲೆಯ ಪ್ರಗತಿಯ ಕುರಿತು ಡಿಜಿಟಲ್‌ ಮಾಧ್ಯಮದ ಮೂಲಕ ಮಾಹಿತಿ ನೀಡಲಾಯಿತು.

ಅಂಚೆ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಮಳಿಗೆಗಳು ರೈತರಿಗೆ ಮಾಹಿತಿ ಒದಗಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.