ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಡಿಪೋ ಉದ್ಘಾಟಿಸಲು ಆಗಸ್ಟ್ 30 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಆಗಮಿಸುತ್ತಿದ್ದು, ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲನೆ ನಡೆಸಿದರು.
ಡಿಪೋ ಕಾರ್ಯಾರಂಭ ಮಾಡಿದಲ್ಲಿ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ಬಗೆಹರಿಯಲಿದೆ. ಹಿರಿಯೂರಿನಿಂದ ಬೆಂಗಳೂರಿಗೆ, ಧರ್ಮಸ್ಥಳ, ಮಂತ್ರಾಲಯ, ತಿರುಪತಿ, ಉಡುಪಿ, ಮಂಗಳೂರು ಮೊದಲಾದ ಕಡೆಗೆ ಬಸ್ ಓಡಿಸುವ ಕುರಿತು ಸಚಿವರ ಜೊತೆ ಮಾತನಾಡುತ್ತೇನೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಹಿರಿಯೂರು ನಗರ ಬೀದರ್–ಶ್ರೀರಂಗಪಟ್ಟಣ, ಪೂನಾ–ಬೆಂಗಳೂರು ಹೆದ್ದಾರಿಗಳನ್ನು ಸಂಪರ್ಕಿಸುವ ಸ್ಥಳವಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಇರುವಂತಹ ಸಾಮರ್ಥ್ಯದ ಡಿಪೋ ನಿರ್ಮಿಸಬೇಕೆಂಬುದು ನನ್ನ ಬಯಕೆಯಾಗಿತ್ತು. 2013ರಲ್ಲಿ ಶಾಸಕನಾಗಿದ್ದಾಗ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಸ್ಥಳವನ್ನು ಗುರುತಿಸಲಾಗಿತ್ತು. ಸದರಿ ಜಾಗವನ್ನು ಸಾರಿಗೆ ಸಂಸ್ಥೆಗೆ ಹಸ್ತಾಂತರಿಸುವುದು ತಡವಾಯಿತು. ನಂತರ ಅಧಿಕಾರಕ್ಕೆ ಬಂದವರು 2008ರ ಅವಧಿಯಲ್ಲಿ ನಾವು ಗುರುತಿಸಿದ್ದ ಜಾಗದಲ್ಲಿ ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಿದರು. ಪ್ರಸ್ತುತ ನಮ್ಮ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಇದೇ ತಿಂಗಳು ಲೋಕಾರ್ಪಣೆಗೊಳ್ಳುತ್ತಿದೆ ಎಂದು ತಿಳಿಸಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್, ತುಮಕೂರಿನ ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರ್ ಎರಗುಪ್ಪ, ಎಇಇಗಳಾದ ನಾಗರಾಜ್, ಹರೀಶ್, ವಿಭಾಗೀಯ ಸಂಚಲನಾಧಿಕಾರಿ ಬಸವರಾಜ್, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಣ್ಣಪ್ಪ, ವಿಠಲ್, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈ ರಲಿಂಗೇಗೌಡ, ನಗರಸಭಾ ಸದಸ್ಯರಾದ ಈ. ಮಂಜುನಾಥ್, ಅಂಬಿಕಾ ಆರಾಧ್ಯ, ಜಗದೀಶ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಮುಖಂಡರುಗಳಾದ ಡಿಶ್ ಮಂಜುನಾಥ್, ಶ್ರೀನಿವಾಸ್, ಜ್ಞಾನೇಶ್, ಶಮ್ಮು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.