ADVERTISEMENT

ಕುಕ್ವಾಡೇಶ್ವರಿ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 11:26 IST
Last Updated 7 ಜನವರಿ 2019, 11:26 IST
ಹೊಳಲ್ಕೆರೆಯ ಹೊರವಯದಲ್ಲಿರುವ ಕುಕ್ವಾಡೇಶ್ವರಿ ದೇವಾಲಯ
ಹೊಳಲ್ಕೆರೆಯ ಹೊರವಯದಲ್ಲಿರುವ ಕುಕ್ವಾಡೇಶ್ವರಿ ದೇವಾಲಯ   

ಹೊಳಲ್ಕೆರೆ: ನಗರದ ಶಕ್ತಿ ದೇವತೆ ಕುಕ್ವಾಡೇಶ್ವರಿ ದೇವಿಯ ಜಾತ್ರೆ ಜ.8 ರಂದು ನಡೆಯಲಿದ್ದು, ಸಕಲ ಸಿದ್ಧತೆ ನಡೆದಿದೆ.

ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-13ರ ಶಿವಮೊಗ್ಗ ರಸ್ತೆಯ ಅಂಚಿನಲ್ಲಿರುವ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆ ತನ್ನದೇ ಆದ ವಿಶೇಷತೆ ಹೊಂದಿದೆ.

ಪಟ್ಟಣದಲ್ಲಿರುವ ಬೀರಲಿಂಗೇಶ್ವರ ಸ್ವಾಮಿಯನ್ನು ಮೆರವಣಿಗೆಯ ಮೂಲಕ ದೇವಾಲಯದವರೆಗೆ ಕರೆತಂದು ಪ್ರತಿಷ್ಠಾಪಿಸುತ್ತಾರೆ. ಅಲಂಕರಿಸಿದ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ದೇವಾಲಯಕ್ಕೆ ತೆರಳುವ ಭಕ್ತರು ಅಲ್ಲಿಯೇ ಅಡುಗೆ ತಯಾರಿಸಿ, ದೇವಿಗೆ ನೈವೇದ್ಯ ಮಾಡುತ್ತಾರೆ. ದೇವಾಲಯದ ಆವರಣದಲ್ಲಿ ಹೊರಬೀಡು ನಡೆಸುವ ಭಕ್ತರು ಅನ್ನಸಂತರ್ಪಣೆ ನಡೆಸುವರು.

ADVERTISEMENT

ಇಲ್ಲಿನ ನಾಗರಿಕರು ಕುಕ್ವಾಡೇಶ್ವರಿ ದೇವಿಯನ್ನು ಶಕ್ತಿದೇವತೆ ಎಂದೇ ನಂಬಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂಜೆ ಸಲ್ಲಿಸುತ್ತಾರೆ. ಹೋಳಿಗೆ ನೈವೇದ್ಯ ಮಾಡಿ ಹರಕೆ ತೀರಿಸುತ್ತಾರೆ. ಮಹಿಳೆಯರು ದೇವಾಲಯದ ಪಕ್ಕದಲ್ಲೇ ಇರುವ ಅಶ್ವತ್ಥ ಮರಕ್ಕೆ ಬಳೆ, ಹೊಸ ಬಟ್ಟೆ ಕಟ್ಟಿ ಹರಕೆ ಹೊರುತ್ತಾರೆ. ಕೆಲವರು ಮರದ ಕಾಂಡಕ್ಕೆ ಬಾಳೆಹಣ್ಣು ಅಂಟಿಸುತ್ತಾರೆ. ಇಷ್ಟಾರ್ಥ ಈಡೇರಿದ ನಂತರ ಹರಕೆ ತೀರಿಸುತ್ತಾರೆ. ಅಪಘಾತಗಳು ಸಂಭವಿಸದಿರಲಿ ಎಂದು ವಾಹನಗಳನ್ನು ದೇವಾಲಯದ ಸುತ್ತ ಓಡಿಸುತ್ತಾರೆ. ಕುಕ್ವಾಡೇಶ್ವರಿ ದೇವಿಯು ಅಮ್ಮ ಏಳುವುದು, ಕೆಮ್ಮು, ಜ್ವರ ಮತ್ತಿತರ ಕಾಲೆಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆ ಇಲ್ಲಿನ ಭಕ್ತರದು.

ಜಾತ್ರೆಯ ದಿನ ಇಡೀ ಪಟ್ಟಣದಲ್ಲಿ ಬಾಡೂಟದ್ದೇ ಕಾರುಬಾರು. ಈಗಾಗಲೇ ಪಟ್ಟಣದ ನಿವಾಸಿಗಳು ಜಾತ್ರೆಗೆಂದು ಕುರಿ, ಟಗರುಗಳನ್ನು ಖರೀದಿಸಿದ್ದಾರೆ. ಮಂಗಳವಾರ ರಾತ್ರಿ ಮನೆಗಳ ಮುಂದೆ, ಮಹಡಿ ಮೇಲೆ ಶಾಮಿಯಾನ ಹಾಕಿ ಸಂಬಂಧಿಗಳಿಗೆ, ಗೆಳೆಯರಿಗೆ ಬಾಡೂಟ ಬಡಿಸುತ್ತಾರೆ.

ಪಟ್ಟಣವೂ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಾರೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.