ADVERTISEMENT

ಗೊಬ್ಬರದ ಕೊರತೆ: ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 15:30 IST
Last Updated 15 ಮೇ 2025, 15:30 IST
ಹೊಸದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಉದ್ಘಾಟಿಸಿದರು
ಹೊಸದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಉದ್ಘಾಟಿಸಿದರು   

ಹೊಸದುರ್ಗ: ಕೃಷಿ ಪರಿಕರಗಳನ್ನು ರೈತರಿಗೆ ಸಮರ್ಪಕವಾಗಿ ಪೂರೈಸಬೇಕು. ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಬೇಕು. ಕಳಪೆ ರಸಗೊಬ್ಬರ ಮಾರಾಟ ಮಾಡಬಾರದು. ಅಕ್ರಮ ದಾಸ್ತಾನು ಮಾಡಿ ರಸಗೊಬ್ಬರ ಕೊರತೆ ಉಂಟಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ‌. ಜಿ. ಗೋವಿಂದಪ್ಪ ಎಚ್ಚರಿಸಿದರು.

ಕೃಷಿ ಇಲಾಖೆ ವತಿಯಿಂದ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಜಾಗೃತ ಸಭೆ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತ ಕಾರ್ಯಾ‌ಗಾರ ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ಪೂರ್ವ ಮುಂಗಾರು ಆಶಾದಾಯಕವಾಗಿದೆ. ಗ್ರಾಮೀಣ ಮಟ್ಟದಲ್ಲಿಯೇ ಕೃಷಿ ಪರಿಕರಗಳು ಸಕಾಲದಲ್ಲಿ ದೊರೆಯಬೇಕು. ನರೇಗಾ ಯೋಜನೆಯಡಿ ಗೋದಾಮು ನಿರ್ಮಿಸಿ, ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಹೊಸ ತಳಿಗಳನ್ನು ಬಳಸಿ ಹೆಚ್ಚು ಉತ್ಪಾದನೆ ಮಾಡಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿದುಕೊಂಡು ಅಗತ್ಯವಿರುವಷ್ಟು ಮಾತ್ರ ರಾಸಾಯನಿಕ ಗೊಬ್ಬರ ಬಳಸಿ, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೃಷಿ ಪರಿಕರಗಳ ಮಾರಾಟಗಾರರು ಕಾನೂನು ಪಾಲನೆ ಮಾಡುವುದು ಕಡ್ಡಾಯ. ರೈತರ ಸೇವೆಗಾಗಿ ಕೆಲಸ ಮಾಡಬೇಕು. ಜಾಗತಿಕ ಮಟ್ಟದ ಬದಲಾವಣೆಯಿಂದಾಗಿ ಗೊಬ್ಬರದ ದರ ಏರುಪೇರಾಗುತ್ತಿದೆ. ಕಾಂಪ್ಲೆಕ್ಸ್ ಗೊಬ್ಬರಗಳ ಬಳಕೆ ಮಾಡುವುದರ ಬಗ್ಗೆ ರೈತರಿಗೆ ಜಾಗೃತಿ ಮೂಡಿ‌ಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ತಿಳಿಸಿದರು.

ಕೃಷಿ ಪರಿಕರಗಳ ಮಾರಾಟಗಾರರು ರಸಗೊಬ್ಬರ ಮಾರಾಟ ದರ ಮತ್ತು ಪರವಾನಗಿ ಪ್ರದರ್ಶಿಸುವುದು ಕಡ್ಡಾಯ. ರೈತರೊಂದಿಗೆ ಸಂಯಮದಿಂದ ವರ್ತಿಸಬೇಕು  ಎಂದು ಸಹಾಯಕ ಕೃಷಿ ನಿರ್ದೇಶಕ (ಜಾಗೃತ ದಳ) ಸಂಕಾಳ ಮಲ್ಲನಗೌಡ ಸಲಹೆ ನೀಡಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಕೃಷಿಕ ಸಮಾಜದ ಅಧ್ಯಕ್ಷ ರಾಗಿ ಶಿವಮೂರ್ತಿ, ಹಿರಿಯ ತೋಟಗಾರಿಕೆ ನಿರ್ದೇಶಕ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ತ್ಯಾಗರಾಜ್, ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀರಾಮು, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಸೇರಿದಂತೆ ಕೃಷಿ ಅಧಿಕಾರಿಗಳು, ಸಿಬ್ಬಂದಿ, ಆತ್ಮ ಹಾಗೂ ಕೃಷಿ ಸಂಜೀವಿನಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.