ಚಿತ್ರದುರ್ಗ: ಬಸ್‌ಗಾಗಿ ಕಾಯುವ ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಹಾಗೂ ಕುಳಿತು ವಿಶ್ರಮಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣಗಳು ಜಿಲ್ಲೆಯಲ್ಲಿ ಸದ್ಬಳಕೆಯಾಗುತ್ತಿಲ್ಲ. ಕುಳಿತುಕೊಳ್ಳುವ ಆಸನಗಳು ಸರಿ ಇಲ್ಲ. ಸ್ವಚ್ಛತೆಯೂ ಇಲ್ಲದೇ ನಿರ್ವಹಣೆ ಕೊರತೆಯಿಂದ ತಂಗುದಾಣಗಳು ಸಂಪೂರ್ಣ ಹಾಳಾಗಿವೆ.
ಗ್ರಾಮೀಣ ಪ್ರದೇಶ ಮಾತ್ರವಲ್ಲ ಜಿಲ್ಲಾ ಕೇಂದ್ರದಲ್ಲೇ ಪ್ರಯಾಣಿಕರ ತಂಗುದಾಣಗಳನ್ನು ಹುಡುಕುವಂತಾಗಿದೆ. ವಿವಿಧೆಡೆ ಇದ್ದೂ ಇಲ್ಲದಂತ ಶೋಚನೀಯ ಸ್ಥಿತಿ ತಲುಪಿವೆ. ಛಾವಣಿಯಂತಿದ್ದ ಸ್ಟೀಲ್ ಶೀಟ್‌ಗಳು ಹಾರಿ ಹೋಗಿವೆ. ಕೆಲವೆಡೆ ಹೋಟೆಲ್‌ಗಳಾಗಿ ಮಾರ್ಪಾಡಾಗಿವೆ. ಇದಕ್ಕೆ ಜಿಲ್ಲಾ ಪಂಚಾಯಿತಿ ಮುಂಭಾಗದ ಪ್ರಯಾಣಿಕರ ತಂಗುದಾಣ ಉತ್ತಮ ನಿದರ್ಶನವಾಗಿದೆ.
ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸೇರಿ ಹಲವು ರೀತಿಯ ಅನುದಾನದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಸೂಕ್ತ ಸ್ಥಳದ ಆಯ್ಕೆಯಲ್ಲೂ ಕೆಲವೆಡೆ ಹಿನ್ನಡೆಯಾಗಿದೆ. ಅಗತ್ಯವಿಲ್ಲದ ಕಡೆ ನಿರ್ಮಾಣ ಮಾಡಿರುವ ಕಾರಣ ತಂಗುದಾಣಗಳ ಸದುಪಯೋಗ ಆಗುತ್ತಿಲ್ಲ.
ಚಿತ್ರದುರ್ಗದಲ್ಲಿ ನಗರ ಸಾರಿಗೆ ಆರಂಭಕ್ಕೂ ಮುನ್ನ ಜಿಲ್ಲಾ ಆಸ್ಪತ್ರೆ ಮುಂಭಾಗ, ತಿಪ್ಪಜ್ಜಿ ವೃತ್ತದಲ್ಲಿ ತಂಗುದಾಣಗಳಿದ್ದವು. ನಗರದಲ್ಲಿ ಮೊದಲ ಬಾರಿಗೆ ನಗರ ಸಾರಿಗೆ ಆರಂಭವಾದಾಗ ಮುಖ್ಯಮಂತ್ರಿಯ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಡಿ 2009–10ನೇ ಸಾಲಿನಲ್ಲಿ ಹಾಗೂ ಬಿಆರ್‌ಜಿಎಫ್ 2007 – 08ನೇ ಸಾಲಿನ ಅನುದಾನದಡಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೆಡೆ ಬಸ್ ತಂಗುದಾಣಗಳನ್ನು ನಿರ್ಮಿಸಲಾಯಿತು.
ಕೆಲ ದಿನಗಳ ಬಳಿಕ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಬಹುತೇಕ ಕಡೆ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾದವು. ಮಳೆಗಾಲದಲ್ಲಿ ಉಪಯೋಗಕ್ಕೆ ಬರದಂತಾಗಿವೆ. ಬೇಸಿಗೆಯಲ್ಲಿ ಪ್ರಯಾಣಿಕರ ಸ್ಥಿತಿ ಹೇಳ ತೀರದಾಗಿದೆ.
ಜಿಲ್ಲಾ ಆಸ್ಪತ್ರೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಳ್ಳಕೆರೆ ಗೇಟ್, ಜೆಸಿಆರ್ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಶಾಸಕರು, ಸಂಸದರು ಹಾಗೂ ವಿವಿಧ ಅಭಿವೃದ್ಧಿ ಯೋಜನೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ತಂಗುದಾಣಗಳನ್ನು ಸಿ.ಸಿ. ರಸ್ತೆ ಕಾಮಗಾರಿ ನೆಪದಲ್ಲಿ ತೆರವುಗೊಳಿಸಲಾಯಿತು.
ಬಳಿಕ ಅದೇ ಸ್ಥಳದಲ್ಲಿ ನಿರ್ಮಿಸಿರುವ ತಂಗುದಾಣಗಳು ಪ್ರಯಾಣಿಕರಿಂದ ದೂರವಾಗಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿವೆ. ಜಿಲ್ಲಾ ಪಂಚಾಯಿತಿ ಮುಂಭಾಗ, ಐಯುಡಿಪಿ ಲೇಔಟ್ ರಸ್ತೆ, ಮೇದೆಹಳ್ಳಿ ರಸ್ತೆ, ತುರುವನೂರು ರಸ್ತೆಯಲ್ಲಿ ತಂಗುದಾಣಗಳು ಹೆಸರಿಗೆ ಮಾತ್ರ ಇವೆ.
ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಒಂದೇ ಒಂದು ಪ್ರಯಾಣಿಕರ ತಂಗುದಾಣ ಇಲ್ಲ. ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾಗಿರುವ ಭರಮಸಾಗರದಲ್ಲಿ ನಿತ್ಯ ಸಾವಿರಾರು ಜನ ಪ್ರಯಾಣಿಕರು ಸಂಚರಿಸುತ್ತಾರೆ. ಹತ್ತಾರು ಗ್ರಾಮಗಳಿಂದ ಈ ಊರು ಆವೃತವಾಗಿದೆ.
ಚಿತ್ರದುರ್ಗದಿಂದ ಬರುವ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಇಳಿದರೆ, ದಾವಣಗೆರೆ ಕಡೆಯಿಂದ ಬರುವವರು ಊರ ಮಧ್ಯದ ನಡು ರಸ್ತೆಯಲ್ಲಿಯೇ ಇಳಿಯುವುದು ಇಂದಿಗೂ ಪರಿಪಾಠ. ಯಾವ ಜನಪ್ರತಿನಿಧಿಯೂ ತಮ್ಮ ಅನುದಾನದಲ್ಲಿ ತಂಗುದಾಣ ನಿರ್ಮಿಸಿ ಪ್ರಯಾಣಿಕರ ಬವಣೆ ತಪ್ಪಿಸುವ ಕೆಲಸಕ್ಕೆ ಮುಂದಾಗಿಲ್ಲ.
ಹಿರೇಬೆನ್ನೂರು ಸರ್ಕಲ್‌ನಿಂದ ಚಿತ್ರದುರ್ಗ, ದಾವಣಗೆರೆ, ಸಿರಿಗೆರೆ ಕಡೆಗೆ ಪ್ರಯಾಣಿಸುವವರಿಗೆ ರಸ್ತೆಯೇ ತಂಗುದಾಣವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಬಿಸಿಲು, ಮಳೆಯಲ್ಲಿ ನಿಂತು ಬಸ್ಸುಗಳಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಆದಾಗ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಬಹುದೆಂಬ ಆಸೆ ಚಿಗುರೊಡೆದಿತ್ತು. ಆದರೆ, ಅದು ಹಾಗೆಯೇ ಕಮರಿ ಹೋಯಿತು. ಹೆದ್ದಾರಿ ವಿಸ್ತರಣೆ ವೇಳೆ ವಿಜಾಪುರ, ಲಕ್ಷ್ಮೀಸಾಗರ ಗ್ರಾಮಗಳ ಬಳಿ ಇದ್ದ ತಂಗುದಾಣಗಳು ನೆಲಸಮವಾದವು. ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ತಂಗುದಾಣಗಳ ಅಗತ್ಯವಿದೆ. ಕೂಡಲೇ ಸಚಿವರು, ಶಾಸಕರು ಈ ಬಗ್ಗೆ ಕ್ರಮವಹಿಸಬೇಕಿದೆ.
ಗ್ರಾಮೀಣ ಪ್ರದೇಶದ ಪ್ರಯಾಣಿಕರ ತಂಗುದಾಣಗಳಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿವೆ. ಇವುಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಕಾಣುತ್ತಿದೆ. ಕೂಡಲೇ ಕ್ರಮವಹಿಸಿ ಪ್ರಯಾಣಿಕ ಸ್ನೇಹಿಗೊಳಿಸಬೇಕುಜಿ. ನಟರಾಜ್ ಅಧ್ಯಕ್ಷರು ವಾಯು ವಿಹಾರ ಸಂಘ ಚಿಕ್ಕಜಾಜೂರು
ಪ್ರಯಾಣಿಕರ ತಂಗುದಾಣಗಳಲ್ಲಿ ಸ್ವಚ್ಛತೆ ಇಲ್ಲದೇ ಮಹಿಳಾ ಪ್ರಯಾಣಿಕರು ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕೈಗೊಂಡರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.ಬಿ.ಟಿ.ರಂಗನಾಥ್ ನಾಗರಿಕರು
ನಾಯಕನಹಟ್ಟಿ ಒಳಮಠದ ರಸ್ತೆಯ ನಾಗರಕಟ್ಟೆ ಬಳಿ ನಿರ್ಮಿಸಿರುವ ಬಸ್ ತಂಗುದಾಣಗಳಿಗೆ ವಿದ್ಯುತ್ ದೀಪ ಅಳವಡಿಸಬೇಕು. ಅಲ್ಲಿ ರಾತ್ರಿ ವೇಳೆ ಮಹಿಳೆಯರು ಮಕ್ಕಳು ನಿಲ್ಲಲು ಆಗದ ಸ್ಥಿತಿ ಇದೆಟಿ.ರೂಪಾ ನಾಯಕನಹಟ್ಟಿ
ತಂಗುದಾಣಗಳು ದಿನ ಕಳೆದಂತೆ ಶೌಚಾಲಯಗಳಾಗಿ ಬೀಡಾಡಿ ದನ ಬೀದಿ ನಾಯಿಗಳ ಆಶ್ರಯ ತಾಣಗಳಾಗುತ್ತಿವೆ. ಶಿಥಿಲಾವಸ್ಥೆ ತಲುಪಿರುವ ತಂಗುದಾಣಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕುಎನ್.ಐ.ಮಹಮ್ಮದ್ ಮನ್ಸೂರ್ ನಾಯಕನಹಟ್ಟಿ
-ವಿ.ಧನಂಜಯ
ನಾಯಕನಹಟ್ಟಿ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಪ್ರಯಾಣಿಕರಿಗೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಬೇಕಿರುವ ತಂಗುದಾಣಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ.
ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಾಣವಾಗಿ, ಉದ್ಘಾಟನೆಗೊಂಡ ಬಳಿಕ ಅವು ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ಆವಾಸ ಸ್ಥಾನಗಳಾಗಿ ಬದಲಾಗುತ್ತಿವೆ.
ನಾಯಕನಹಟ್ಟಿ ಪಟ್ಟಣ ಸೇರಿದಂತೆ ಹೋಬಳಿಯಲ್ಲಿನ ತಂಗುದಾಣಗಳು ಮೂಲ ಉದ್ದೇಶಕ್ಕೆ ವಿರುದ್ಧವಾಗಿವೆ. ಹಲವೆಡೆ ಕಟ್ಟಡಗಳು ಶಿಥಿಲಗೊಂಡಿವೆ. ಆವರಣಗಳು ಕಸದ ಕೂಪ ಹಾಗೂ ನಿರಾಶ್ರಿತರ ತಾಣಗಳಾಗಿವೆ. ಬಹುತೇಕ ಕಡೆ ಮೂಲ ಸೌಲಭ್ಯಗಳಿಲ್ಲದೆ ಬಳಲುತ್ತಿವೆ. ಕೆಲವು ಕಡೆ ಜಾಹೀರಾತುಗಳದ್ದೇ ಕಾರುಬಾರಾಗಿದೆ.
ತಂಗುದಾಣಗಳ ಮೇಲೆ ಅಗತ್ಯ ಮಾಹಿತಿಯೂ ಇಲ್ಲವಾಗಿದೆ. ಹೀಗಾಗಿ ಪರ ಊರುಗಳಿಂದ ಬಂದವರು ತಾವು ಎಲ್ಲಿದ್ದೇವೆ ಎಂಬುದರ ಮಾಹಿತಿ ಸಿಗದೆ ಪರದಾಡುವಂತಾಗಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಎಲ್ಲೆಡೆಯೂ ಪರಿಸ್ಥಿತಿ ಇದೇ ರೀತಿ ಇದೆ. ತಂಗುದಾಣಗಳನ್ನು ನಿರ್ಮಿಸುವಾಗ ಇರುವ ಉತ್ಸಾಹ ಬಳಿಕ ಮರೆಯಾಗುತ್ತದೆ. ಇವು ಸುಣ್ಣ, ಬಣ್ಣ ಕಾಣದೇ ಎಷ್ಟೋ ವರ್ಷಗಳಾಗಿವೆ.
ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಖಲಗೆರೆ, ಲಂಬಾಣಿಹಟ್ಟಿ, ದಾಸರಮುತ್ತೇನಹಳ್ಳಿ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ, ತೊರೆಕೋಲಮ್ಮನಹಳ್ಳಿ, ಕೊರಡಿಹಳ್ಳಿ, ಅಬ್ಬೇನಹಳ್ಳಿ ಹೊಸೂರು, ಮಲ್ಲೇನಬೋರನಹಟ್ಟಿ, ಮುಷ್ಟಲಗುಮ್ಮಿ ಚೌಳಕೆರೆ, ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಹಟ್ಟಿ, ಮಲ್ಲೂರಹಟ್ಟಿ, ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಕೆರೆ, ಕಾಟವ್ವನಹಳ್ಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ತಂಗುದಾಣಗಳು ಶಿಥಿಲಾವಸ್ಥೆ ತಲುಪಿವೆ. ಚಾವಣಿ, ಗೋಡೆಗಳು ಕುಸಿಯುವ ಹಂತಕ್ಕೆ ತಲುಪಿವೆ.
ನಾಯಕನಹಟ್ಟಿ ಪಟ್ಟಣಕ್ಕೆ ನಿತ್ಯ ನೂರಾರು ಭಕ್ತರು, ಪ್ರವಾಸಿಗರು, ಶಾಲಾ ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆಯ ನಾಗರಕಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವಾಗಲೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಇಲ್ಲಿ ಮೂರು ತಂಗುದಾಣ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ₹ 5 ಲಕ್ಷದ ತಲಾ ಎರಡು ಹೈಟೆಕ್ ತಂಗುದಾಣ ಹಾಗೂ ₹ 10 ಲಕ್ಷದ ಒಂದು ಆರ್‌ಸಿಸಿ ಹಾಕಿರುವ ತಂಗುದಾಣ ಇದೆ. ಈ ಮೂರು ಒಂದೇ ರಸ್ತೆಯಲ್ಲಿ ಬಹುತೇಕ ಸಮೀಪದಲ್ಲೇ ಇವೆ. ಕೇವಲ ಮೂರ್ನಾಲ್ಕು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹೈಟೆಕ್ ತಂಗುದಾಣದ ಶೀಟ್‍ಗಳು ಕಿತ್ತುಹೋಗಿವೆ. ಬಸ್‌ಗಳು ಸಹ ತಂಗುದಾಣದ ಬಳಿ ನಿಲ್ಲದೇ ತುಸು ಹಿಂದೆ ಅಥವಾ ಮುಂದೆ ನಿಲ್ಲುತ್ತವೆ.
ಜೆ.ತಿಮ್ಮಪ್ಪ
ಚಿಕ್ಕಜಾಜೂರು: ಚಿಕ್ಕಜಾಜೂರು ವ್ಯಾಪ್ತಿಯ ಹೊಳಲ್ಕೆರೆ- ಹೊಸದುರ್ಗ ಮಾರ್ಗದಲ್ಲಿನ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡ ಬಹುತೇಕ ಗ್ರಾಮಗಳಲ್ಲಿ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ತಂಗುದಾಣಗಳು ಇದ್ದೂ ಇಲ್ಲದಂತಾಗಿವೆ.
ಕೆಲವು ಕಡೆ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ತಂಗುದಾಣಗಳು ಕುಡುಕರ ಹಾಗೂ ಇಸ್ಪೀಟ್ ಆಡುವವರ ಅಡ್ಡೆಗಳಾಗಿ ಮಾರ್ಪಟ್ಟಿವೆ.
ತಂಗುದಾಣದ ಸುತ್ತಲೂ ಮದ್ಯದ ಬಾಟಲಿಗಳು, ಸಿಗರೇಟ್, ತಿಂಡಿ, ಗುಟ್ಕಾ ಪ್ಯಾಕೇಟ್‌ಗಳ ರಾಶಿ ಕಾಣಿಸುತ್ತದೆ. ಅಲ್ಲದೆ, ಕೆಲವು ತಂಗುದಾಣಗಳಲ್ಲಿ ಗ್ರಾಮದವರು ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಕೆಲವೆಡೆ ಪ್ರಯಾಣಿಕರು ನಿಲ್ಲುವುದಕ್ಕೂ ಸ್ಥಳವಿರುವುದಿಲ್ಲ.
‘ದೂರದ ಊರಿಗೆ ಹೋಗಲು ಗ್ರಾಮದಿಂದ ಒಂದೆರಡು ಕಿ.ಮೀ. ದೂರವಿರುವ ಮುಖ್ಯ ರಸ್ತೆಯಲ್ಲಿನ ತಂಗುದಾಣಗಳಿಗೆ ಬರಬೇಕು. ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದಿದ್ದಾಗ ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಕುಡಿಯುವ ನೀರು ಕೂಡ ಸಿಗುವುದಿಲ್ಲ’ ಎನ್ನುತ್ತಾರೆ ಅಂದನೂರು, ಬಂಡೆಬೊಮ್ಮೇನಹಳ್ಳಿ, ರಂಗವ್ವನಹಳ್ಳಿ, ಪಾಡಿಗಟ್ಟೆ ಗ್ರಾಮಗಳ ಮಹಿಳೆಯರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಪ್ರಯಾಣಿಕರ ತಂಗುದಾಣಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇವುಗಳಿಗೆ ವಿದ್ಯುತ್ ವ್ಯವಸ್ಥೆಯಿಲ್ಲ, ಪ್ರಯಾಣಿಕರಿಗೆ ಗ್ರಾಮಗಳ ಹೆಸರು, ದೂರ ಸೇರಿದಂತೆ ಯಾವುದೇ ಮಾಹಿತಿ ಫಲಕಗಳಿಲ್ಲ. ಎಲ್ಲೆಂದರಲ್ಲಿ ಕಸಕಡ್ಡಿ ಹಾಕುತ್ತಿರುವುದರಿಂದ ಸ್ವಚ್ಛತೆ ಮಾಯವಾಗಿದೆ.
ಗೋಡೆಗಳ ಮೇಲೆ ಅಶ್ಲೀಲ ಬರವಣಿಗೆ, ಚಿತ್ರಗಳು, ಪ್ರೇಮ ನಿವೇದನೆಯ ಬರಹಗಳು ಕಂಡು ಬರುತ್ತಿವೆ. ಇದರಿಂದಾಗಿ ಯಾವೊಬ್ಬ ಪ್ರಯಾಣಿಕರೂ ಬಸ್ ತಂಗುದಾಣಗಳ ಬಳಿ ತೆರಳದಂತಹ ಸ್ಥಿತಿ ನಿರ್ಮಾಣವಾಗಿದೆ.
ನಾಯಕನಹಟ್ಟಿ ಸಮೀಪದ ನೇರಲಗುಂಟೆ ತಂಗುದಾಣ ಜಾಹೀರಾತಿನಿಂದ ಆವೃತವಾಗಿದೆ. ದೊಡ್ಡಘಟ್ಟ, ಭೀಮಗೊಂಡನಹಳ್ಳಿ, ಹಿರೇಕೆರೆ ಕಾವಲು, ಗಂಗಯ್ಯನಹಟ್ಟಿಯಲ್ಲಿ ಚಾವಣಿ ಕಿತ್ತು ಹೋಗಿದ್ದು, ಬೆಂಚುಗಳು ಮುರಿದಿವೆ. ಸಿಮೆಂಟ್ ಕಟ್ಟೆಗಳು ಒಡೆದು ಹೋಗಿವೆ. ಹಲವು ಬಸ್ ತಂಗುದಾಣಗಳು ಶೌಚಾಲಯಗಳಾಗಿ ಬದಲಾಗಿವೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.