ADVERTISEMENT

ಲಕ್ಷ್ಮೀಸಾಗರದಲ್ಲಿ ಪ್ರತಿ ಭಾನುವಾರ ವಾರದ ಸಂತೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 5:48 IST
Last Updated 28 ಜನವರಿ 2026, 5:48 IST
ಲಕ್ಷ್ಮೀಸಾಗರದಲ್ಲಿ ವಾರದ ಸಂತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ ಚಾಲನೆ ನೀಡಿದರು 
ಲಕ್ಷ್ಮೀಸಾಗರದಲ್ಲಿ ವಾರದ ಸಂತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ ಚಾಲನೆ ನೀಡಿದರು    

ಸಿರಿಗೆರೆ: ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ಇನ್ನು ಮುಂದೆ ಪ್ರತಿ ಭಾನುವಾರ ವಾರದ ಸಂತೆ ನಡೆಯಲಿದೆ. ಗ್ರಾಮದ ಗ್ರಾಮೀಣ ಸಂತೆ ಮಾರುಕಟ್ಟೆಗೆ ಮೀಸಲಿರಿಸಿದ್ದ ಜಾಗದಲ್ಲಿ ಮಂಗಳವಾರ ಗ್ರಾಮೀಣ ಸಂತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ ಚಾಲನೆ ನೀಡಿದರು.

‘ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. ಇದರಿಂದ ಗ್ರಾಮೀಣ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಕೆಲಸ ಆಗುತ್ತದೆ. ರೈತರು ತಾವು ಬೆಳೆದ ತರಕಾರಿ, ಹಣ್ಣು ಮುಂತಾದ ಬೆಳೆಗಳನ್ನು ಸಂತೆಗೆ ತಂದು ಮಧ್ಯವರ್ತಿಗಳ ಕಾಟ ಇಲ್ಲದೆ ಮಾರಾಟ ಮಾಡಬೇಕು’ ಎಂದು ಸರಸ್ವತಿ ಹೇಳಿದರು.

ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಶೀಲಾ ಮಾತನಾಡಿ, ‘ಗ್ರಾಮದಲ್ಲಿ ವಾರದ ಸಂತೆ ನಡೆಸಲು ಬಹಳ ದಿನಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜನರು ಒತ್ತಾಯಿಸುತ್ತಿದ್ದರು. ಈಗ ಅವರ ಬೇಡಿಕೆ ಈಡೇರಿದೆ. ಇಲ್ಲಿ ಆರಂಭವಾಗಿರುವ ಗ್ರಾಮೀಣ ಸಂತೆಯ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಲಕ್ಷ್ಮಿಸಾರ ಗ್ರಾಮ ಪಂಚಾಯಿತಿ ಸದಸ್ಯರಾದ ಧನಂಜಯ, ಸುನಿಲ್, ಕವಿತಾ, ನಾಗರಾಜ್, ವಸಂತ್, ಸುರೇಶ್, ಅಲಿಜಾನ್ ಹಾಗೂ ಪಂಚಾಯಿತಿ ಸಿಬ್ಬಂದಿ ಬಿಲ್ ಕಲೆಕ್ಷರ್ ಚಿದಾನಂದ್, ಕಾರ್ಯದರ್ಶಿ ಸತೀಶ್ ಹಾಗೂ ಗ್ರಾಮಸ್ಥರಾದ ಬಸವರಾಜ್, ನಾಗರಾಜ್ ಲಕ್ಷ್ಮಿಸಾಗರ, ಪರುಶುರಾಮ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.