
ಚಳ್ಳಕೆರೆ: ನಿವೇಶನಗಳ ಖಾತೆಗೆ ಆಗ್ರಹಿಸಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ 16 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬುಧವಾರ ಚಿತ್ರದುರ್ಗ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿ ಧರಣಿ ಸ್ಥಗಿತಗೊಳಿಸುವಂತೆ ದಲಿತ ಕುಟುಂಬಗಳ ಮನವೊಲಿಸಿದರು.
ತಾಲ್ಲೂಕಿನ ಪರಶುರಾಂಪುರ ಹೋಬಳಿ ಟಿ.ಎನ್. ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ಅರ್ಹ 87 ದಲಿತ ಕುಟುಂಬಗಳಿಗೆ 1992ನೇ ಸಾಲಿನಲ್ಲಿ ನೀಡಿದ್ದ ನಿವೇಶನ ಖಾತೆ ಮಾಡಿಕೊಡುವುದರ ಜೊತೆಗೆ ಹೊಸ ಹಕ್ಕುಪತ್ರ ವಿತರಿಸಲಾಗಿದೆ. ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ನಂತರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ತಾಲ್ಲೂಕು ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ದಲಿತ ಸಮುದಾಯವನ್ನು ವಂಚಿಸದೆ ಸರ್ಕಾರದಿಂದ ದೊರೆಯುವ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು ಎಂದು ಅಧಿಕಾರಿಗಳಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ. ರಾಜಗಿರಿ ಮನವಿ ಮಾಡಿದರು.
ತಹಶೀಲ್ದಾರ್ ರೇಹಾನ್‍ಪಾಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶ ಶಿಧರ್, ಜಿಲ್ಲಾ ಘಟಕದ ಅಧ್ಯಕ್ಷ ಚೌಳೂರು ಎಚ್. ಮಂಜುನಾಥ, ಟಿ.ಎನ್. ಕೋಟೆ ರಂಗಸ್ವಾಮಿ ಮಾತನಾಡಿದರು.
ಓಂಕಾರಮೂರ್ತಿ, ಬಸವರಾಜ, ಸ್ವಾಮಿ, ಮಹಿಳಾ ಪ್ರತಿನಿಧಿ ದುರುಗಮ್ಮ, ಸಾಕಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.