ಹೊಸದುರ್ಗ: ಯಾವುದೇ ನೆಪ ಹೇಳದೇ 94–ಸಿ ಅಡಿಯಲ್ಲಿ ಶೀಘ್ರವೇ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕು ಎಂದು ಶಾಸಕ ಬಿ.ಜಿ ಗೋವಿಂದಪ್ಪ ಪಿಡಿಒಗಳಿಗೆ ಸೂಚಿಸಿದರು.
ತಾ.ಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ 94 ಸಿ ಅಡಿಯಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದವರಿಗೆ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಪಿಡಿಒಗಳು ಜಂಟಿ ಸಮೀಕ್ಷೆ ನಡೆಸಿ, ತಾಲ್ಲೂಕು ಕಚೇರಿಗೆ ಶೀಘ್ರವೇ ದಾಖಲೆ ಸಲ್ಲಿಸಬೇಕು ಎಂದರು.
ಮಧುರೆ ಗ್ರಾಮ ಪಂಚಾಯಿತಿಯ ಸಂಕಯ್ಯನಹಟ್ಟಿ ಗ್ರಾಮದಲ್ಲಿ 28 ಜನರು ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಲು ಕಾನೂನು ತೊಡಕುಗಳಿವೆ ಎಂದು ಪಿಡಿಒ ಶಾಂತಕುಮಾರ್ ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ಸಭೆಯಲ್ಲಿದ್ದ ತಹಶೀಲ್ದಾರ್ ಹಾಗೂ ಅರಣ್ಯ ಅಧಿಕಾರಿಗೆ ಸೂಚಿಸಿದರು.
ಪ್ರತಿಬಾರಿ ಸಭೆ ಕರೆದಾಗಲೂ ಕೇವಲ ಸಮಸ್ಯೆಗಳನ್ನೇ ಹೇಳಿದರೆ ಅದಕ್ಕೆ ಪರಿಹಾರ ಯಾವಾಗ? ಅಧಿಕಾರಿಗಳು ಜನರು ಸಮಸ್ಯೆ ಬಗೆಹರಿಸುವತ್ತಲೂ ಗಮನ ಹರಿಸಬೇಕು ಎಂದು ತಿಳಿಸಿದರು.
‘ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವವರಿಗೆ 94ಸಿ ಮತ್ತು 94ಸಿಸಿ ಅಡಿಯಲ್ಲಿ ತಿಂಗಳಾಂತ್ಯದೊಳಗೆ ಹಕ್ಕುಪತ್ರ ನೀಡಿ ನೋಂದಣಿ ಮಾಡಿಸಿಕೊಡಲಾಗುವುದು. ಮೊದಲು 71 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿತ್ತು. ಯಾವುದೇ ಗ್ರಾಮಗಳು ಪಟ್ಟಿಯಿಂದ ಹೊರಗುಳಿಯದಂತೆ ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ, ಮತ್ತೆ 42 ಹೊಸ ಕಂದಾಯ ಗ್ರಾಮಗಳನ್ನು ಸೇರಿಸಿ ಒಟ್ಟು 113 ಕಂದಾಯ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರ್ಹರಿಗೆ ಮಾತ್ರ ಹಕ್ಕುಪತ್ರ ನೀಡಲಾಗುವುದು’ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ತಾ.ಪಂ. ಇಒ ಸುನಿಲ್‍ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗಭೂಷಣ್, ವಲಯ ಅರಣ್ಯಾಧಿಕಾರಿ ಸುನಿಲ್‍ಕುಮಾರ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಉಪತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿದ್ದರು.
ಅನಧಿಕೃತವಾಗಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ 94ಸಿ ಮತ್ತು 94ಸಿಸಿ ಅಡಿಯಲ್ಲಿ ಶೀಘ್ರವೇ ಪತ್ರ ವಿತರಣೆ 113 ಕಂದಾಯ ಗ್ರಾಮಗಳನ್ನು ಗುರುತಿಸಿದ ಆಡಳಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.