ಚಿತ್ರದುರ್ಗ: ‘ಕಾನೂನು ಪದವಿ ಪಡೆಯಲು ಐದು ವರ್ಷಗಳ ಕಾಲ ಶ್ರಮಪಟ್ಟು ಓದಿದರೆ ಮುಂದಿನ 50 ವರ್ಷಗಳ ಕಾಲ ಜನರಿಂದ ಗೌರವ ಸ್ವೀಕರಿಸಬಹುದು. ವಿದ್ಯೆ ಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ. ವಕೀಲರು ಹಣಕ್ಕೆ ಹೆಚ್ಚು ಮಾನ್ಯತೆ ನೀಡದೆ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಯಶಸ್ಸು ಗಳಿಸಲು ಸಾಧ್ಯ’ ಎಂದು ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎನ್.ಸತೀಶ್‌ಗೌಡ ಹೇಳಿದರು.
ನಗರದ ಸರಸ್ವತಿ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ವಿದ್ಯಾರ್ಥಿ ಕಾನೂನು ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಮಾನವ ಹಕ್ಕುಗಳ ವೇದಿಕೆ, ರೆಡ್‍ಕ್ರಾಸ್‍ಘಟಕ, ಇಕೋ ಕ್ಲಬ್ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಕಾಡುತ್ತದೆ. ಇಂಗ್ಲಿಷ್ ಬರುವುದಿಲ್ಲ, ಯಾವುದೇ ಕೌಶಲವಿಲ್ಲ ಎಂಬ ಗೊಂದಲದಿಂದ ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಆದರೆ, ಕೀಳರಿಮೆ ತೊರೆದು ಸವಾಲುಗಳನ್ನು ಮೆಟ್ಟಿ ನಿಂತರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹುಟ್ಟು– ಸಾವು ಸಾಮಾನ್ಯ. ಅದು ಎಲ್ಲರ ಜೀವನದಲ್ಲಿಯೂ ನಡೆಯುತ್ತದೆ, ಇದರ ಮಧ್ಯ ಉತ್ತಮವಾದ ಸಾಧನೆ ಮಾಡಬೇಕಿದೆ’ ಎಂದು ಹೇಳಿದರು.
‘ಓದಿನ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಹಣ ಹೊಂದಿದವನು ಮಾತ್ರ ಶ್ರೀಮಂತನಲ್ಲ. ಉತ್ತಮ ಆರೋಗ್ಯ ಹೊಂದಿದವರೂ ಶ್ರೀಮಂತರೇ. ಇದಕ್ಕಾಗಿ ಪ್ರತಿ ದಿನ ವ್ಯಾಯಾಮ, ಕಸರತ್ತು, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಮಾನಸಿಕ, ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು’ ಎಂದರು.
ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಕೇಂಪೇಗೌಡ ಮಾತನಾಡಿ, ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಗಮನ ಕೊಡಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಸಮಾಜದಲ್ಲಿ ವೈದ್ಯರು, ವಕೀಲರು, ಶಿಕ್ಷಕ ವೃತ್ತಿ ಶ್ರೇಷ್ಠವಾದವುಗಳು. ಇವುಗಳಲ್ಲಿ ತೊಡಗಿಸಿಕೊಂಡವರು ಸದಾ ಜನರ ಏಳಿಗೆಯನ್ನು ಬಯಸುತ್ತಾರೆ’ ಎಂದರು.
ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್. ಹನುಮಂತಪ್ಪ, ಹಿರಿಯ ವಕೀಲ ಫಾತ್ಯಾರಾಜನ್, ಕಾರ್ಯದರ್ಶಿ ಡಿ.ಕೆ. ಶೀಲಾ, ಆಡಳಿತ ಮಂಡಳಿ ಸದಸ್ಯರಾದ ರಾಮರಾವ್, ಪ್ರಾಂಶುಪಾಲರಾದ ಎಂ.ಎಸ್. ಸುಧಾದೇವಿ, ವಿದ್ಯಾರ್ಥಿ ಕಾನೂನು ವೇದಿಕೆಯ ಅಧ್ಯಕ್ಷ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.