ಹಿರಿಯೂರು: ಕಾರ್ಮಿಕರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಸೌಲಭ್ಯಗಳನ್ನು ಪಡೆಯಲು ಕಾನೂನು ಅರಿವು ಅತ್ಯಗತ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಸುಜಾತಾ ಸುವರ್ಣ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಅರಿವು ಇದ್ದಾಗ ಮಾತ್ರವೇ ತಮಗೆ ಏನೇನು ಸೌಲಭ್ಯಗಳಿವೆ ಎಂದು ತಿಳಿದುಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ಕಾನೂನು ಉಲ್ಲಂಘನೆಯಾಗದಂತೆ ನಡೆದುಕೊಳ್ಳಬೇಕು. ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳು ಅವರಿಗೆ ತಲುಪುವಂತಾಗಲು ಕಾನೂನಿನ ಅರಿವು ಇಂದು ಹೆಚ್ಚಾಗಿದೆ. ದೇಶದ ಅಭಿವೃದ್ಧಿ ಪ್ರತಿಯೊಬ್ಬರ ಕರ್ತವ್ಯ. ಕಾರ್ಮಿಕರು ತಮ್ಮ ಕೆಲಸದ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಅವಶ್ಯಕ. ಅದರಲ್ಲಿಯೂ ನಿತ್ಯ ಶ್ರಮವಹಿಸಿ ದುಡಿಯುವ ಕಾರ್ಮಿಕರಿಗೆ ಕಾನೂನಿನ ತಿಳಿವಳಿಕೆ ಅವಶ್ಯಕ. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಕೊಡಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಸೂಚಿಸಿದರು.
‘ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಕಾರ್ಮಿಕರಿಗೆಂದು ಪ್ರತ್ಯೇಕ ಇಲಾಖೆ ಸ್ಥಾಪಿಸಿದೆ. ಕಾರ್ಮಿಕರ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ ತಡೆಯುವುದು ಇಲಾಖೆಯ ಆದ್ಯ ಕರ್ತವ್ಯ. ಇಲಾಖೆ ಕಾರ್ಮಿಕರಿಗೆ ನೂರಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಾರ್ಮಿಕ ನಿರೀಕ್ಷಕ ಅಲ್ಲಾಭಕ್ಷ್ ಮನವಿ ಮಾಡಿದರು.
ವಕೀಲ ಎಸ್. ಶೇಷಾದ್ರಿ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಆರ್.ಜಿ. ಚಿದಾನಂದಪ್ಪ, ವಕೀಲರ ಸಂಘದ ಉಪಾಧ್ಯಕ್ಷೆ ಎಚ್. ಬೀನಾರಾಣಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.