ADVERTISEMENT

ಸ್ವಚ್ಛತೆ, ನೀರು ಪೂರೈಕೆ ಆದ್ಯತೆಯಾಗಲಿ

ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ದೂರುಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 6:48 IST
Last Updated 17 ಡಿಸೆಂಬರ್ 2020, 6:48 IST
ಚಿತ್ರದುರ್ಗದಲ್ಲಿ ಬುಧವಾರ ನಡೆದ ಇಲ್ಲಿನ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ವೇತಾ, ಪೌರಾಯುಕ್ತ ಜೆ.ಟಿ. ಹನುಮಂತರಾಜು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ನಡೆದ ಇಲ್ಲಿನ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ವೇತಾ, ಪೌರಾಯುಕ್ತ ಜೆ.ಟಿ. ಹನುಮಂತರಾಜು ಇದ್ದರು.   

ಚಿತ್ರದುರ್ಗ: ನಗರದ ವಾಣಿಜ್ಯ ರಸ್ತೆಗಳಲ್ಲಿ, ಮಾರುಕಟ್ಟೆಗಳ ಮುಂಭಾಗ ಕಸ ಎಸೆಯುವುದು ಮುಂದುವರಿದಿದೆ. ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಹಲವು ವಾರ್ಡ್‌ಗಳಲ್ಲಿ ಬೀದಿ ದೀಪಗಳಿಲ್ಲ. ಕೆಲವೆಡೆ ಯುಜಿಡಿ ಪೈಪ್‌ ಒಡೆದು ಕುಡಿಯುವ ನೀರಿನ ಜೊತೆ ಚರಂಡಿ ನೀರು ಸೇರುತ್ತಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಇಲ್ಲಿನ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ದೂರುಗಳ ಮಹಾಪೂರವನ್ನೇ ಹರಿಸಿದರು. ಅದರಲ್ಲಿ ಸ್ವಚ್ಛತೆ ಮತ್ತು ನೀರಿನ ಕುರಿತು ಹೆಚ್ಚು ಚರ್ಚೆಗಳಾದವು.

‘ನಗರದ ವಿವಿಧ ವಾರ್ಡ್‌ಗಳಿಗೆ ಬೆಳಿಗ್ಗೆ 10ರೊಳಗೆ ಕಸ ಸಂಗ್ರಹಿಸುವ ವಾಹನ ಬರುತ್ತದೆ. ಆದರೆ, ಮುಖ್ಯ ರಸ್ತೆ ಮಾರ್ಗಗಳಲ್ಲಿ 10 ಗಂಟೆಯ ನಂತರ ವ್ಯಾಪಾರಸ್ಥರು ಬಾಗಿಲು ತೆರೆಯುವ ಕಾರಣ ಕಸವನ್ನು ರಸ್ತೆ, ಚರಂಡಿಗೆ ಎಸೆಯುವ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ನಗರದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ’ ಎಂದು ಸದಸ್ಯ ಮಲ್ಲಿಕಾರ್ಜುನ್ ದೂರಿದರು. ಇದಕ್ಕೆ ಮತ್ತೊಬ್ಬ ಸದಸ್ಯ ವೆಂಕಟೇಶ್ ಧ್ವನಿಗೂಡಿಸಿದರು.

ADVERTISEMENT

‘ನಗರದಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ನಿತ್ಯ ಕಸದ ರಾಶಿ ಹೆಚ್ಚಾಗುತ್ತಿದೆ. ಕೆಲ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ವಾರಕ್ಕೊಮ್ಮೆ ಆಗುತ್ತಿದೆ. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ’ ಎಂದು ಸದಸ್ಯರಾದ ನಸರುಲ್ಲಾ, ಮಂಜುನಾಥ್ ಗೊಪ್ಪೆ, ಶ್ರೀದೇವಿ, ಭಾಸ್ಕರ್ ಸೇರಿ ಹಲವು ಸದಸ್ಯರು ಸಭೆಯ ಗಮನಕ್ಕೆ ತಂದರು.

‘ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕಸವೂ ಹೆಚ್ಚುತ್ತಿದೆ. ನಗರಸಭೆಗೆ 252 ಪೌರಕಾರ್ಮಿಕರ ಅಗತ್ಯವಿದೆ. ಆದರೆ, ಸದ್ಯ 172 ಇದ್ದಾರೆ. ಖಾಲಿ ಹುದ್ದೆಗಳ ಭರ್ತಿಗಾಗಿ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಕಸ ಸಂಗ್ರಹಿಸುವ ವಾಹನಗಳ ಸಂಖ್ಯೆಯೂ ಕಡಿಮೆ ಇವೆ. ಹೊಸದಾಗಿ 12 ವಾಹನಗಳು ಬರಲಿವೆ. ಆಗ ಕಸ ವಿಲೇವಾರಿ ಸಮಸ್ಯೆ ಕಡಿಮೆಯಾಗಲಿದೆ’ ಎಂದು ಪೌರಾಯುಕ್ತ ಜೆ.ಟಿ. ಹನುಮಂತರಾಜು ಪ್ರತಿಕ್ರಿಯಿಸಿದರು.

‘ಮಧ್ಯಾಹ್ನದ ನಂತರ ವಾಣಿಜ್ಯ ಸೇರಿ ಮುಖ್ಯ ರಸ್ತೆ ಮಾರ್ಗಗಳಲ್ಲೂ ಕಸ ಸಂಗ್ರಹಿಸುವಂತೆ ವಾಹನಗಳ ಚಾಲಕರಿಗೆ ಸೂಚನೆ ನೀಡಲಾಗುವುದು’ ಎಂದು ಪರಿಸರ ಎಂಜಿನಿಯರ್ ಶಿವಶಂಕರ್ ಭರವಸೆ ನೀಡಿದರು.

‘10 ದಿನವಾದರೂ ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಶಾಂತಿಸಾಗರದ ಬಳಿಯ ಮೋಟಾರು ಪಂಪ್ ದುರಸ್ತಿ, ಬುರುಜನರೊಪ್ಪ ಸಮೀಪ ವಿದ್ಯುತ್ ಸಮಸ್ಯೆ ಎಂಬುದಾಗಿ ಸಬೂಬು ಹೇಳುತ್ತಾರೆ. ಮೋಟಾರು ಪಂಪ್ ದುರಸ್ತಿಗೆ ನೀಡಿ ಒಂದೂವರೆ ವರ್ಷವಾಗಿದೆ. ಆಗಿನಿಂದಲೂ ಇದೇ ಉತ್ತರ ನೀಡುತ್ತಾರೆ’ ಎಂದು ಸದಸ್ಯರಾದ ಶ್ರೀನಿವಾಸ್, ಭಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದರು.

‘ಜೆ.ಜೆ.ಹಟ್ಟಿ, ಬಡಾಮಕಾನ್, ಏರೋಪ್ಲೇನ್ ಬಿಲ್ಡಿಂಗ್ ಈ ಮಾರ್ಗಗಳು ಅತ್ಯಂತ ಕಿರಿದಾಗಿವೆ. ಇಲ್ಲಿ ಕೆಲ ವರ್ಷಗಳ ಹಿಂದೆ ಹಾಕಲಾದ ಯುಜಿಡಿ ಪೈಪ್‌ ಒಡೆದಿದ್ದು, ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಸೇರಿ ಮಲಿನವಾಗುತ್ತಿದೆ. ಈ ಕುರಿತು ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸದಸ್ಯ ನಸರುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

‘ನೀರು ಪೋಲಾಗುವುದನ್ನು ತಡೆಯಲಿಕ್ಕಾಗಿಯೇ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಪ್ರತಿ ಮನೆಗೂ ಮೀಟರ್ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ. ಎಲ್ಲಾ ಸದಸ್ಯರೂ ತಮ್ಮ ವಾರ್ಡ್‌ಗಳ ಜನರನ್ನು ಇದಕ್ಕೆ ಸಹಕರಿಸುವಂತೆ ಒಪ್ಪಿಸಲು ಮುಂದಾದರೆ, ಯೋಜನೆ ಸಫಲವಾಗಲಿದೆ’ ಎಂದು ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇದೇ ವೇಳೆ ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.