ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಯಾಗಲಿ: ಸಿ.ಎಸ್.ಷಡಾಕ್ಷರಿ ಒತ್ತಾಯ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 4:09 IST
Last Updated 7 ನವೆಂಬರ್ 2021, 4:09 IST
ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 5ನೇ ದಿನವಾದ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 5ನೇ ದಿನವಾದ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.   

ಸಾಣೇಹಳ್ಳಿ (ಹೊಸದುರ್ಗ): ‘ಶಿಕ್ಷಕರು ಪಾಠ ಮಾಡುವುದಕ್ಕಿಂತ ಬಿಸಿಯೂಟ, ಸಮವಸ್ತ್ರ, ತರಬೇತಿ, ಸ್ವಚ್ಛತೆಯಂಥ ಬೇರೆ ಕೆಲಸಗಳನ್ನು ಮಾಡುವುದರಿಂದ ಗುಣಮಟ್ಟದ ಶಿಕ್ಷಣ ಕಡಿಮೆಯಾಗಿದೆ. ದೆಹಲಿಯಲ್ಲಿರುವಂತೆ ಸರ್ಕಾರಿ ಶಾಲೆಗಳು ನಮ್ಮಲ್ಲಿಯೂ ಅಭಿವೃದ್ಧಿಯಾಗಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಒತ್ತಾಯಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 5ನೇ ದಿನವಾದ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ನ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗಿದೆ. ಆನ್‌ಲೈನ್ ಶಿಕ್ಷಣದ ಮೂಲಕ ಜೀವನ ಮೌಲ್ಯಗಳನ್ನು, ಕೌಶಲಗಳನ್ನು ಕೊಡಲು ಸಾಧ್ಯವಿಲ್ಲ. ಆಫ್‌ಲೈನ್ ಶಿಕ್ಷಣ ಅತ್ಯಂತ ವಾಸ್ತವಿಕ ಮತ್ತು ಪ್ರಸ್ತುತವಾದುದು. ಆನ್‌ಲೈನ್ ಶಿಕ್ಷಣ ಕೇವಲ ಪ್ರಾಯೋಗಿಕವಾಗಿತ್ತು. ಮೊಬೈಲ್ ಉಪಯುಕ್ತವಾಗಿರುವಂತೆ ಅನಾಹುತಕಾರಿಯೂ ಆಗಿದೆ. ಎಷ್ಟೇ ಆಧುನಿಕ ಮಾಧ್ಯಮಗಳು ಬಂದಿದ್ದರೂ ಬೆಳಿಗ್ಗೆ ಎದ್ದು ಪೇಪರ್ ಓದುವ ಹವ್ಯಾಸ ಕಡಿಮೆಯಾಗಿಲ್ಲ’ ಎಂದು ತಿಳಿಸಿದರು.

ADVERTISEMENT

‘ಶಿಕ್ಷಣ; ಆನ್‌ಲೈನ್ -ಆಫ್‌ಲೈನ್’ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಶಿಕ್ಷಣ ತಜ್ಞ ನಿರಂಜನಾರಾಧ್ಯ, ‘ಆನ್‌ಲೈನ್ ಅಥವಾ ಆಫ್‌ಲೈನ್ ಶಿಕ್ಷಣದ ವಿಧಾನಗಳೇ ಹೊರತು ಅದೇ ಶಿಕ್ಷಣವಲ್ಲ. ಆನ್‌ಲೈನ್ ಶಿಕ್ಷಣ ತಾತ್ಕಾಲಿಕ ಪರಿಹಾರವಾಗಬಹುದಷ್ಟೇ. ತರಗತಿಯ ಪ್ರಕ್ರಿಯೆಯಲ್ಲದ ಶಿಕ್ಷಣ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಭಾರತದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಗಗನ ಕುಸುಮವಾಗಿದೆ. ಬ್ರಿಟಿಷರೂ ಶಿಕ್ಷಣ ವ್ಯವಸ್ಥೆಯನ್ನು ಇಷ್ಟು ಛಿದ್ರಛಿದ್ರಗೊಳಿಸಿರಲಿಲ್ಲ. ಅಷ್ಟರ ಮಟ್ಟಿಗೆ ಛಿದ್ರವಾಗಿಸಿರುವುದು ದುರದೃಷ್ಟಕರ ಸಂಗತಿ. ತರಗತಿಗೊಬ್ಬ ಶಿಕ್ಷಕ, ವಿಷಯಕ್ಕೊಬ್ಬ ಶಿಕ್ಷಕರ ನೇಮಕ ಆಗಬೇಕು’ ಎಂದು ಒತ್ತಾಯಿಸಿದರು.

‘ಮೊಬೈಲ್ ಹತ್ತಿರ-ಪುಸ್ತಕ ದೂರ ದೂರ’ ಕುರಿತು ಉಪನ್ಯಾಸ ನೀಡಿದ ಕವಿ ಎಚ್‌.ಡುಂಡಿರಾಜ್ , ‘ಅತಿಯಾಗಿ ಮೊಬೈಲ್ ಬಳಕೆಯಿಂದ ನಿದ್ರೆ ಹಾಳಾಗುವುದು. ಸುಳ್ಳು ಹೇಳಲು ಸುಲಭವಾಗಿದೆ. ದೈಹಿಕ ಚಟುವಟಿಕೆ ಕಡಿಮೆಯಾಗಿ ಶಕ್ತಿ ಕುಂದುತ್ತಿದೆ. ಸಾಮಾಜಿಕ ಜಾಲತಾಣಗಳು ಭ್ರಾಮಕ ಜಗತ್ತನ್ನು ಸೃಷ್ಟಿಸುತ್ತವೆ. ಗಾಳಿಸುದ್ದಿ ಹರಡಲು, ಅಂತಸ್ತಿನ ಪ್ರದರ್ಶನಕ್ಕೂ ಮೊಬೈಲ್ ಸಾಧನವಾಗಿದೆ. ಪುಸ್ತಕದ ಮೇಲೂ ಮೊಬೈಲ್ ದುಷ್ಪರಿಣಾಮ ಬೀರುತ್ತದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ಮಾತನಾಡಿದರು.

ವಿಚಾರ ಸಂಕಿರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ವಿಚಾರ ಸಂಕಿರಣದ ನಂತರ ಶಿವಸಂಚಾರ–21ರ ಕಲಾವಿದರು ‘ಸತ್ಯ ಹರಿಶ್ಚಂದ್ರ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.