
ಧರ್ಮಪುರ: ಓದುಗರಿಗಾಗಿ ಇದ್ದ ಇಲ್ಲಿನ ಗ್ರಾಮ ಪಂಚಾಯಿತಿಯ ಅರಿವು ಗ್ರಂಥಾಲಯ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿದೆ. ಗ್ರಂಥಾಲಯ ಮೇಲ್ವಿಚಾರಕರು ಅನಾರೋಗ್ಯದಿಂದ ಸಾವಿಗೀಡಾದ ನಂತರ ಈ ಗ್ರಂಥಾಲಯದ ಬಾಗಿಲು ತೆರೆಯುವವರೇ ಇಲ್ಲವಾಗಿದ್ದಾರೆ.
ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಒಂದು ಚಿಕ್ಕ ಕೊಠಡಿಯಲ್ಲಿ ಪ್ರಾರಂಭವಾಗಿತ್ತು. ನಂತರ ಹೊಸದಾಗಿ ಪ್ರಾರಂಭವಾದ ಪಿ.ಕೆ.ರಂಗಣ್ಣಗೌಡ ಬಡಾವಣೆಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿ ಇಲ್ಲಿಗೆ ಸ್ಥಳಾಂತರಗೊಂಡಿತು. ಬಡಾವಣೆಯಲ್ಲಿ ಸಾರ್ವಜನಿಕರ ಯಾವೊಂದು ಕಟ್ಟಡ ಇರದ ಕಾರಣ ಓದುಗರು ಬರುವುದಕ್ಕೆ ಹಿಂದೇಟು ಹಾಕಿದ್ದರು. ಆದರೂ, ಗ್ರಂಥಾಲಯ ಮೇಲ್ವಿಚಾರಕರು ಬಂದು ಹೋಗುತ್ತಿದ್ದರು.
ಗ್ರಂಥಾಲಯ ಮೇಲ್ವಿಚಾರಕರಾಗಿದ್ದ ಶ್ರೀನಿವಾಸ್ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿ ಒಂದೂವರೆ ವರ್ಷ ಕಳೆದಿದೆ. ಅಂದಿನಿಂದ ಈ ಗ್ರಂಥಾಲಯದ ಬಾಗಿಲು ತೆರೆಯುವ ಕೆಲಸವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರವಣಗೆರೆ, ಅರಳೀಕೆರೆ, ಧರ್ಮಪುರ, ಬೆನಕನಹಳ್ಳಿ ಮತ್ತು ಕೃಷ್ಣಾಪುರ ಗ್ರಾಮಗಳು ಸೇರಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಶೈಕ್ಷಣಿಕ ಸಂಸ್ಥೆಗಳಿವೆ. ಮೊದಲು ಸಾಕಷ್ಟು ವಿದ್ಯಾರ್ಥಿಗಳು ಗ್ರಂಥಾಲಯವನ್ನು ಬಳಸಿಕೊಳ್ಳುತ್ತಿದ್ದರು.
ಆದರೆ, ಗ್ರಂಥಾಲಯ ಸ್ಥಳಾಂತರಗೊಂಡ ಮೇಲೆ ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೊರತೆ ಆಗಿತ್ತು. ಆದರೂ ಗ್ರಂಥಾಲಯ ನಡೆಯುತ್ತಿತ್ತು. ಈಗ ಬಾಗಿಲು ಮುಚ್ಚಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ.
ಇನ್ನು ಈ ಕಟ್ಟಡದ ಸುತ್ತ ಖಾಲಿ ಜಾಗ ಇದ್ದು ರಸ್ತೆ ವಿಸ್ತರಣೆಯ ತ್ಯಾಜ್ಯ ಇಲ್ಲಿಗೆ ಬಂದು ಸಂಗ್ರಹವಾಗಿದ್ದು, ಕಟ್ಟಡದ ಸಮೀಪ ಹೋಗಲಿಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ.
‘ಚಿತ್ರದುರ್ಗ ಜಿಲ್ಲೆಯ ಗಡಿ ಹೋಬಳಿ ಪ್ರದೇಶವಾಗಿರುವ ಧರ್ಮಪುರದಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಇಲ್ಲದೇ ಇರುವುದು ದುರದೃಷ್ಟಕರ. ಇದ್ದ ಅರಿವು ಕೇಂದ್ರ ಗ್ರಂಥಾಲಯ ಮುಚ್ಚಿ ಒಂದೂವರೆ ವರ್ಷ ಕಳೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ನನ್ನಂಥ ನೂರಾರು ಪರೀಕ್ಷಾರ್ಥಿಗಳಿಗೆ ತೊಂದದರೆಯಾಗಿದೆ’ ಎಂದು ಯು.ಅಭಿಲಾಷ ಚಿದಾನಂದ ಅರಳೀಕೆರೆ ಬೇಸರ ವ್ಯಕ್ತಪಡಿಸುತ್ತಾರೆ.
‘ಜಿಲ್ಲೆಯಲ್ಲಿ ಕೆಲವು ಕಡೆ ಇಂತಹ ಸಮಸ್ಯೆಗಳು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ 6 ಜನರ ಸಮಿತಿ ರಚಿಸಲಾಗಿದೆ. ಮೀಸಲಾತಿ ಮತ್ತಿತರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಜಿ.ಪಂ ಸಿಇಒ ಡಾ.ಎಸ್.ಆಕಾಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.