ADVERTISEMENT

ಲೋಕಾಯುಕ್ತ ಬಲೆಗೆ ಕಾನ್‌ಸ್ಟೆಬಲ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:36 IST
Last Updated 30 ಅಕ್ಟೋಬರ್ 2022, 4:36 IST

ಹಿರಿಯೂರು: ವಿದ್ಯಾರ್ಥಿನಿಯೊಬ್ಬರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಹಿಂತಿರುಗಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲ್ಲೂಕಿನ ಜವನಗೊಂಡನಹಳ್ಳಿಯ ಪೊಲೀಸ್ ಉಪಠಾಣೆಯಕಾನ್‌ಸ್ಟೆಬಲ್‌ ಹರೀಶ್ ಶನಿವಾರ ₹ 2,000 ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ತಾಲ್ಲೂಕಿನ ಕಾಟನಾಯಕನಹಳ್ಳಿಯ ಚಾಮರಾಜ ಎಂಬುವವರ ಮಗಳು ಬೃಂದಾ ಅವರು ಅ. 20ರಂದು ಜವನಗೊಂಡನಹಳ್ಳಿಯ ಪಂಕ್ಚರ್ ಅಂಗಡಿ ಬಳಿ ಮೊಬೈಲ್ ಕಳೆದುಕೊಂಡಿದ್ದರು.

ಜವನಗೊಂಡನಹಳ್ಳಿ ಪೊಲೀಸ್ ಉಪಠಾಣೆಗೆ ದೂರು ಕೊಡಲು ಹೋಗಿದ್ದಾಗ ಕಾನ್‌ಸ್ಟೆಬಲ್‌ ಹರೀಶ್, ‘ದೂರು ಬೇಡ, ಮೊಬೈಲ್ ವಿವರ ಕೊಡಿ ಹುಡುಕಿಸಿ ಕೊಡುತ್ತೇನೆ. ಅದಕ್ಕೆ ಹಣ ಕೊಡಬೇಕು, ದೂರು ನೀಡಲೇ ಬೇಕೆಂದಿದ್ದರೆ ಹಿರಿಯೂರು ಗ್ರಾಮಾಂತರ ಠಾಣೆಗೆ ಹೋಗಿ’ ಎಂದು ತಿಳಿಸಿದ್ದರು.

ADVERTISEMENT

ಈ ಮೇರೆಗೆ ಅ. 25ರಂದು ಬೃಂದ ದೂರು ದಾಖಲಿಸಿದ್ದರು.

ಅ. 27ರಂದು ಹರೀಶ್ ವಿದ್ಯಾರ್ಥಿನಿಗೆ ಫೋನ್ ಮಾಡಿ, ‘ಖಾಸಗಿಯವರಿಂದ ನಿಮ್ಮ ಮೊಬೈಲ್ ಪತ್ತೆ ಮಾಡಿಸಿದ್ದೇನೆ. ಅದಕ್ಕೆ ₹ 5,000 ನೀಡಬೇಕು ಎಂದು ತಿಳಿಸಿದ್ದಾರೆ. ‘ಕಡಿಮೆ ಮಾಡಿ’ ಎಂದು ದೂರುದಾರರು ಮನವಿ ಮಾಡಿದರೂ ಒಪ್ಪದೇ ಇದ್ದಾಗ ₹ 3,000 ನೀಡಿ, ಉಳಿದ ₹ 2,000ವನ್ನು ಮೊಬೈಲ್ ಕೊಟ್ಟಾಗ ಕೊಡುತ್ತೇವೆ ಎಂದು ತಿಳಿಸಿ ಹರೀಶ್ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಬೃಂದಾ, ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.