ADVERTISEMENT

ಹೊಸದುರ್ಗ: ಲಿಂಗಾಯತ ತತ್ವ ಪ್ರತಿಪಾದಿಸುವ ಮಾಚಿದೇವ

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:08 IST
Last Updated 13 ಆಗಸ್ಟ್ 2021, 4:08 IST
‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದಲ್ಲಿ ಗುರುವಾರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು
‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದಲ್ಲಿ ಗುರುವಾರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು   

ಸಾಣೇಹಳ್ಳಿ (ಹೊಸದುರ್ಗ): ‘ಲಿಂಗಾಯತ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮಡಿವಾಳ ಮಾಚಿದೇವರು ಅವುಗಳಿಗೆ ಅಪಚಾರ ಮಾಡುವವರನ್ನು ಕಂಡಾಗ ವೀರಭದ್ರನ ಅವತಾರ ತಾಳುವರು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 12ನೇ ದಿನವಾದ ಗುರುವಾರ ನಡೆದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಡಿವಾಳ ಮಾಚಿದೇವರದು ಮಲಿನವಾದ ಬಟ್ಟೆಗಳನ್ನು, ಮನಸ್ಸುಗಳನ್ನು ಮಡಿ ಮಾಡುವ ಕಾಯಕ. ಭಕ್ತರಲ್ಲದ ಭವಿಗಳ ಬಟ್ಟೆ ತೊಳೆಯುವುದಿಲ್ಲ ಎನ್ನುವುದು ಅವರ ಪ್ರತಿಜ್ಞೆ. ಕಲಿದೇವರದೇವ ಅಂಕಿತ. ಇವರ 346 ವಚನಗಳು ದೊರೆತಿವೆ. ಆಚಾರ, ವಿಚಾರ, ಏಕದೇವ ನಿಷ್ಠೆಗೆ ಹೆಸರಾದವರು. ಸ್ವಾಭಿಮಾನಿಯಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳಿ ಜನರ ಅಂಕುಡೊಂಕುಗಳನ್ನು ತಿದ್ದುವ ಗಣಾಚಾರಿ. ಅವರ ವಚನಗಳಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಆಶಯವಿದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಶರಣರು ಜಾತಿಗೆ ಅಂಟಿಕೊಳ್ಳದೆ ಜಾತ್ಯತೀತರಾಗಿ ಬಾಳಿದವರು. ಆದರೆ ಇಂದು ಅದೇ ಶರಣರ ಹೆಸರಿನಲ್ಲಿ ಜಾತಿಯ ಪೋಷಣೆ ನಡೆಯುತ್ತಿರುವುದು ವಿಷಾದನೀಯ. ಯಾವುದೇ ಶರಣರ, ಮಹಾತ್ಮರ ಜಯಂತಿಗಳನ್ನು ಸರ್ಕಾರ ಮಾಡಬೇಕಿಲ್ಲ, ರಜೆ ನೀಡಬೇಕಿಲ್ಲ. ಹಾಗೆ ಮಾಡಿದರೆ ಅವರ ಕಾಯಕ ಶ್ರದ್ಧೆಯನ್ನು ಕಡೆಗಣಿಸಿದ ಹಾಗೆ ಆಗುತ್ತದೆ. ಜಯಂತಿಗಳನ್ನು ಆಚರಿಸುವ ಹಣದಲ್ಲಿ ಶರಣರ, ಮಹಾತ್ಮರ ವಚನ-ಮಾತು-ಆಲೋಚನೆಗಳನ್ನು ಚಿಕ್ಕ-ಚಿಕ್ಕ ಪುಸ್ತಕಗಳಲ್ಲಿ ಪ್ರಕಟಿಸಿ ಮಕ್ಕಳಿಗೆ ಸಿಗುವಂತೆ ಮಾಡಿದರೆ ಜಯಂತಿಗಳ ಆಚರಣೆ ಅರ್ಥಪೂರ್ಣವಾಗುವುದು. ಕುಲದ ಶ್ರೇಷ್ಠತೆಯನ್ನು ಮೆರೆಯುವನೇ ಹೊಲೆಯ ಎನ್ನುವ ಮಾಚಿದೇವರ ವ್ಯಾಖ್ಯಾನ ಅಪೂರ್ವವಾದುದು’ ಎಂದು ಬಣ್ಣಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ ಮಡಿವಾಳ ಮಾಚಿದೇವ ವಿಷಯ ಕುರಿತು ಮಾತನಾಡಿದ ಮೈಸೂರಿನ ಪತ್ರಕರ್ತ ಗಣೇಶ ಅಮೀನಗಡ, ‘ಶರಣರ ಜನ್ಮದಿನಗಳನ್ನು ಆಯಾ ಜಾತಿಯವರು ಮಾತ್ರ ಆಚರಿಸುತ್ತಿರುವುದು ಆ ಶರಣರ ಆಶಯಗಳಿಗೇ ವಿರುದ್ಧವಾದುದು. ಮಡಿವಾಳ ಮಾಚಿದೇವರಿಗೆ ಪ್ರಖರವಾದ ಚಿಂತನೆಗಳಿರುವುದು ಅವರ ವಚನಗಳಿಂದ ತಿಳಿಯುತ್ತದೆ. ಕಲಿದೇವರದೇವ ಎನ್ನುವುದು ಇವರ ವಚನಾಂಕಿತ. ಬಂಡಾಯ ಮನೋಧರ್ಮದ ಮಾಚಿದೇವರು ನಡೆ-ನುಡಿಗಳನ್ನು ಪ್ರಶ್ನಿಸುತ್ತಲೇ ಸಮಕಾಲೀನರಾಗುವರು. ವಚನದ ರಚನೆಯ ನುಡಿವ ಬಯಲ ರಂಜಕರೆಲ್ಲ ಭಕ್ತರಪ್ಪರೇ? ವಚನ ತನ್ನಂತಿರದು, ತಾನು ವಚನದಂತಿರ... ಎನ್ನುವ ಮೂಲಕ ಶಬ್ದಾಡಂಭರಿಗಳನ್ನು ಟೀಕಿಸಿದ್ದಾರೆ’ ಎಂದು ವಿವರಿಸಿದರು.

ಚಿಕ್ಕಮಗಳೂರಿನ ವೈಷ್ಣವಿ ಎನ್. ರಾವ್ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನ ಗೀತೆ ಹಾಡಿತು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.