ADVERTISEMENT

ಅಂತರ್ಜಲ ಬತ್ತಿದರೆ ಮರಳುಗಾಡು ಸೃಷ್ಟಿ: ಜೆ.ಸಿ.ಮಾಧುಸ್ವಾಮಿ

ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಳವಳ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 13:16 IST
Last Updated 28 ಜೂನ್ 2021, 13:16 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಚಿತ್ರದುರ್ಗ: ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆ ಬೀಳುತ್ತದೆ. ಬಿದ್ದ ಮಳೆ ನೀರಿನ ಲಭ್ಯತೆಯೂ ವಿರಳ. ಸಕಾಲಕ್ಕೆ ಅಂತರ್ಜಲ ಮರುಪೂರಣ ಆಗದಿದ್ದರೆ ಮರಳುಗಾಡು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಮುರುಘಾ ಮಠದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಅಟಲ್ ಭೂಜಲ ಯೋಜನೆಯ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಏಳು ರಾಜ್ಯಗಳ ಅಂತರ್ಜಲ ಮಟ್ಟ ಕುಸಿದಿದೆ. ಕರ್ನಾಟಕದ 14 ಜಿಲ್ಲೆಯ 41 ತಾಲ್ಲೂಕಿನ ಪರಿಸ್ಥಿತಿ ಭೀಕರವಾಗಿದೆ. ಲಭ್ಯವಿರುವ ನೀರಿನಲ್ಲಿ ಶೇ 2ರಷ್ಟನ್ನು ಮಾತ್ರ ಬಳಕೆ ಮಾಡಲು ಸಾಧ್ಯವಿದೆ. ಅನಗತ್ಯ ಬಳಕೆಯಿಂದ ಅಂತರ್ಜಲದ ಶೋಷಣೆ ಆಗುತ್ತಿದೆ. ನೀರನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ; ಪುನರ್ ಬಳಕೆ ಮಾಡಬಹುದಷ್ಟೇ’ ಎಂದರು.

ADVERTISEMENT

‘ನೀರಿನ ಸಂರಕ್ಷಣೆ, ಮಿತ ಬಳಕೆ ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಕೇಂದ್ರ ಸರ್ಕಾರ ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದೆ. ಸಮುದಾಯ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಬೇಕು ಎಂಬುದು ಸರ್ಕಾರದ ನಿರೀಕ್ಷೆ. ಗ್ರಾಮ ಪಂಚಾಯಿತಿ ಹಾಗೂ ಹಳ್ಳಿಯ ಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ. ಗ್ರಾಮಸಭೆಯ ಮೂಲಕ ಅಗತ್ಯ ಕಾಮಗಾರಿಗಳ ಆಯ್ಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

‘ಈ ಯೋಜನೆಗೆ ₹ 1,100 ಕೋಟಿ ಮೀಸಲಿಡಲಾಗಿದೆ. ಹಣವನ್ನು ಯಾರಿಗೂ ನೇರವಾಗಿ ನೀಡುವುದಿಲ್ಲ. ಹರಿಯುವ ನೀರನ್ನು ಇಂಗಿಸುವ, ಜಲಮೂಲಗಳನ್ನು ಭರ್ತಿ ಮಾಡುವ ಪ್ರಯತ್ನ ನಡೆಯಲಿದೆ. ಕೃಷಿ ಹೊಂಡ, ಕೆರೆ–ಕಟ್ಟೆ, ಬಾವಿ, ಬ್ಯಾರೇಜ್‌ ತುಂಬಿಸುವ ಆಲೋಚನೆ ಇದೆ. ರಾಜಕೀಯ ಹಸ್ತಕ್ಷೇಪ ಇಲ್ಲದೇ ಜಲಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.

‘ಭೂಮಿಯಿಂದ ಅವಿಯಾಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕಿದೆ. ತುಂತುರು ಹಾಗೂ ಹನಿ ನೀರಾವರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಇಲಾಖೆಗಳ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ನೆರವು ಪಡೆಯಲಾಗುವುದು’ ಎಂದು ಮಾಹಿತಿ ನೀಡಿದರು.

‘ಸರ್ಕಾರ ಜಲನೀತಿ ರೂಪಿಸುತ್ತಿದೆ. ಸಚಿವ ಸಂಪುಟದಲ್ಲಿ ಇದು ಚರ್ಚೆ ಆಗಿದೆ. ನೀರು ಹಾಯಿಸಿ ಕೃಷಿ ಮಾಡುವ ಪದ್ಧತಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ನೀರಿನ ಮಿತ ಬಳಕೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಿದೆ. ಅಡಿಕೆ ಬೆಳೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ನೀಡುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಲಾಗಿದೆ. ಇದನ್ನು ಪುನಾ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಧರ್ಮಪುರ ಕೆರೆಗೆ ₹ 90 ಕೋಟಿ

ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆ ತುಂಬಿಸುವ ಬಹುನಿರೀಕ್ಷಿತ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ₹ 90 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ಶಾಸಕಿ ಕೆ.ಪೂರ್ಣಿಮಾ ಸಂತಸ ವ್ಯಕ್ತಪಡಿಸಿದರು.

‘ಧರ್ಮಪುರ ಕೆರೆ ತುಂಬಿಸುವ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಲ್ಲಿ ಸಚಿವ ಮಾಧುಸ್ವಾಮಿ ನೆರವಾದರು. ಕೆರೆ ತುಂಬಿದರೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ವಿ.ವಿ.ಸಾಗರ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ತೊಡಕುಗಳನ್ನು ಸಚಿವರು ಬಗೆಹರಿಸಬೇಕು’ ಎಂದು ಮನವಿ ಮಾಡಿದರು.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವನ್‍ಮೂರ್ತಿ, ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದರು.

ವಿವೇಚನೆ ಇಲ್ಲದೇ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಭೂಮಿಯ ಅತಿ ಆಳದಿಂದ ನೀರು ತೆಗೆಯುವುದು ತಪ್ಪು. ನೀರು ಕಡಿಮೆ ಇರುವ ಪ್ರದೇಶದಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕಿದೆ.

ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ

ಮೇಲ್ದಂಡೆ ಅನುಷ್ಠಾನಗೊಂಡರೂ ನೀರಿನ ಸಮಸ್ಯೆ ನೀಗುವುದಿಲ್ಲ. ನಾಲೆಯ ಎಡಭಾಗಕ್ಕೆ ನೀರು ಕೊಡುವುದಿಲ್ಲ. ವಿ.ವಿ.ಸಾಗರದ ಹಿನ್ನೀರು ಹೊಸದುರ್ಗ ತಾಲ್ಲೂಕಿನಲ್ಲಿ ಚಾಚಿಕೊಂಡಿದ್ದರೂ ಪ್ರಯೋಜನ ಆಗುತ್ತಿಲ್ಲ.

ಗೂಳಿಹಟ್ಟಿ ಡಿ.ಶೇಖರ್‌, ಶಾಸಕ, ಹೊಸದುರ್ಗ

ನೀರು ಹಾಯಿಸಿ ಬೆಳೆ ಬೆಳೆಯುವ ಪದ್ದತಿಯನ್ನು ರದ್ದು ಮಾಡಬೇಕು. ಇದರಿಂದ ಭೂಮಿ ಚೌಳು ಆಗುತ್ತದೆ. ಸಣ್ಣ ನೀರಾವರಿಗೆ ಒತ್ತು ಸಿಗಬೇಕು. ಭಾರಿ ನೀರಾವರಿ ಸಚಿವ ಸ್ಥಾನವನ್ನು ಮಾಧುಸ್ವಾಮಿ ಅವರಿಗೆ ನೀಡಬೇಕು.

ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.