ADVERTISEMENT

ಎಸ್‌ಸಿ ಪಟ್ಟಿಗೆ ಸೇರಿಸಲು ಮಡಿವಾಳರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 14:39 IST
Last Updated 6 ಜನವರಿ 2019, 14:39 IST
ಚಿತ್ರದುರ್ಗದ ಮಡಿವಾಳ ಗುರುಪೀಠದಲ್ಲಿ ಭಾನುವಾರ ನಡೆದ ಜಾಗೃತಿ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ
ಚಿತ್ರದುರ್ಗದ ಮಡಿವಾಳ ಗುರುಪೀಠದಲ್ಲಿ ಭಾನುವಾರ ನಡೆದ ಜಾಗೃತಿ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ   

ಚಿತ್ರದುರ್ಗ: ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮಡಿವಾಳರು ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದರು.

ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜಾಗೃತಿ ಸಮಾವೇಶದಲ್ಲಿ ರಾಜಕೀಯ ಮುಖಂಡರಿಗೆ ಅಹವಾಲು ಸಲ್ಲಿಸಿದರು. ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

‘ಮಡಿವಾಳ ಸಮುದಾಯ ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿದೆ. ಬಡತನ, ನಿರುದ್ಯೋಗ ಸಮಾಜವನ್ನು ಕಾಡುತ್ತಿದೆ. ಆರ್ಥಿಕವಾಗಿ ಸಬಲರಾಗಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಮೀಸಲಾತಿ ಸೌಲಭ್ಯ ಸಿಗದೇ ಏಳಿಗೆ ಹೊಂದಲು ಸಾಧ್ಯವಾಗುತ್ತಿಲ್ಲ’ ಎಂದು ಮಡಿವಾಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ಬೆಳಕು ಚೆಲ್ಲಿದರು.

ADVERTISEMENT

‘ರಾಜಕೀಯ ಪಕ್ಷಗಳು ಸಮುದಾಯದ ಎದುರು ಆಮಿಷಗಳನ್ನು ತೋರಿಸುತ್ತಿವೆ. ಇದರ ಬದಲು ಮೀಸಲಾತಿ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ. ಮಕ್ಕಳಿಗೆ ಶಿಕ್ಷಣ ಸಿಕ್ಕರೆ ಆರ್ಥಿಕವಾಗಿಯೂ ಸಬಲರಾಗಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರದ ಇದನ್ನು ಗಂಭೀರವಾಗಿ ಯೋಚಿಸಬೇಕು’ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಅವರು, ‘ಮಡಿವಾಳ, ತಿಗುಳ, ಉಪ್ಪಾರ ಸೇರಿದಂತೆ ಐದು ಜಾತಿಗಳ ಪರಿಸ್ಥಿತಿ ಒಂದೇ ರೀತಿ ಇದೆ. ಇಂತಹ ಜಾತಿಗಳಿಗೆ ‘ಪ್ರವರ್ಗ 2ಎ’ ಸೌಲಭ್ಯ ಸಾಲುತ್ತಿಲ್ಲ ಎಂಬ ಅರಿವೂ ಇದೆ. ಸಮಾನ ಸಮಸ್ಯೆ ಎದುರಿಸುತ್ತಿರುವ ಐದು ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಯಾಗಿದ್ದಾಗ ಚಿಂತನೆ ನಡೆದಿತ್ತು’ ಎಂದು ಹೇಳಿದರು.

‘ಮಡಿವಾಳರ ಕುಲಶಾಸ್ತ್ರೀಯ ಅಧ್ಯಯನದ ವರದಿ ಗಮನಿಸುತ್ತೇನೆ. ಜಾತಿ ಸಮೀಕ್ಷೆಯ ವರದಿಯನ್ನು ನೋಡುತ್ತೇನೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ದೇವೇಗೌಡ ಅವರೊಂದಿಗೆ ಮಾತನಾಡಿ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.