ADVERTISEMENT

ಬುಡಕಟ್ಟು ಸಮುದಾಯದ ಗಂಗಾಪೂಜೆ ಉತ್ಸವ

ಶಿವರಾತ್ರಿ ಅಂಗವಾಗಿ ವಿಜೃಂಭಣೆಯಿಂದ ನಡೆಯುವ ಹಬ್ಬ

ಶಿವಗಂಗಾ ಚಿತ್ತಯ್ಯ
Published 28 ಫೆಬ್ರುವರಿ 2022, 5:03 IST
Last Updated 28 ಫೆಬ್ರುವರಿ 2022, 5:03 IST
ಜುಂಜಪ್ಪ ಮತ್ತು ರಂಗನ್ನಾಥ ಸ್ವಾಮಿ ದೇವರು
ಜುಂಜಪ್ಪ ಮತ್ತು ರಂಗನ್ನಾಥ ಸ್ವಾಮಿ ದೇವರು   

ಚಳ್ಳಕೆರೆ: ತಾಲ್ಲೂಕಿನ ಬುಡಕಟ್ಟು ಸಮುದಾಯದಲ್ಲಿ ಶಿವರಾತ್ರಿ ಅಂಗವಾಗಿ ನಡೆಯುವ ಗಂಗಾಪೂಜೆ ವಿಶೇಷತೆ ಹೊಂದಿದೆ.

ಕಾಡುಗೊಲ್ಲ ಮತ್ತು ಮ್ಯಾಸಬೇಡರು ಸಾಂಸ್ಕೃತಿಕ ‌ವೀರರೂ, ಪಶುಪಾಲಕ ದೇವರಾದ ಎತ್ತಪ್ಪ, ಜುಂಜಪ್ಪ, ಕ್ಯಾತಪ್ಪ, ಚಿಕ್ಕಣ್ಣ, ಈರಣ್ಣ, ಹಂದಿ ಸಿರಿಯಣ್ಣ, ಮ್ಯಾಸಬೇಡರ ಗಾದ್ರಿಪಾಲನಾಯಕ, ಜಗಲೂರು ಪಾಲನಾಯಕ, ದಡ್ಲಿಸೂರನಾಯಕ ಮುಂತಾದ ವೀರರನ್ನೇ ಆರಾಧ್ಯ ದೈವಗಳನ್ನಾಗಿ ಮಾಡಿಕೊಂಡು ಆರಾಧಿಸುತ್ತಾ ಬಂದಿದ್ದಾರೆ.ಈ ದೇವರಗಂಗಾ ಪೂಜೆ ಹಾಗೂ ಗುಗ್ಗರಿ ಹಬ್ಬದ ಮಹೋತ್ಸವ ಮಾರ್ಚ್‌ 5ರವರೆಗೆ ನಡೆಯಲಿದೆ.

ಸತ್ತರೂ, ಹೆತ್ತರೂ ಸೂತಕವಾದಾಗ ಗುಡಿಯ ಬಾಗಿಲಿಗೆ ಮುಳ್ಳಿನ ಕಳ್ಳೆ ಕಟ್ಟುವ ವಿಧಿಯನ್ನು ತಂದವನು ಎತ್ತಯ್ಯ ದೇವರು ಎಂಬ ನಂಬಿಕೆ ಕಾಡುಗೊಲ್ಲರಲ್ಲಿ ಇದೆ. ಹೀಗಾಗಿ ಪ್ರತಿ ಮಹಾಶಿವರಾತ್ರಿ ಹಬ್ಬದಲ್ಲಿ ಡಿ. ಉಪ್ಪಾರಹಟ್ಟಿ, ಬಂಗಾರದೇವರಹಟ್ಟಿ, ನೇರಲಗುಂಟೆ, ಚಿಕ್ಕೇನಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿ, ಚಳ್ಳಕೆರೆಯ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಸೇರಿ ತಾಲ್ಲೂಕಿನ ವಿವಿಧ ಹಟ್ಟಿಗಳಲ್ಲಿ ನೆಲೆಸಿರುವ ಕಾಡುಗೊಲ್ಲ ಮತ್ತು ಮ್ಯಾಸಬೇಡ ಬುಡಕಟ್ಟು ಸಮುದಾಯದವರು ತಮ್ಮ ಕುಲ ಮೂಲದ ಆರಾಧ್ಯ ದೈವಗಳ ಗಂಗಾ ಪೂಜೆ ಹಾಗೂ ಗುಗ್ಗರಿ ಹಬ್ಬದ ಮಹೋತ್ಸವವನ್ನು ಆಚರಿಸುತ್ತಾರೆ.

ADVERTISEMENT

ಫೆ.28ರಂದು ಬೆಳಿಗ್ಗೆಡಿ.ಉಪ್ಪಾರಹಟ್ಟಿ, ಕಾಟಪ್ಪನಹಟ್ಟಿ ಗ್ರಾಮದ ಕಾಡುಗೊಲ್ಲರು, ತಮ್ಮ ಆರಾಧ್ಯ ದೈವಗಳಾದ ಎತ್ತಪ್ಪ, ಜುಂಜಪ್ಪ, ರಂಗನಾಥ ಸ್ವಾಮಿಯ ಪೆಟ್ಟಿಗೆ ದೇವರನ್ನು ದೊಡ್ಡೇರಿ ಬಳಿ ಹಳ್ಳಕ್ಕೆ ಹಾಗೂ ನೇರಲಗುಂಟೆ ಗ್ರಾಮದ ಬಂಗಾರೇಶ್ವರಿ ದೇವಿಯನ್ನು ಗೋಸಿಕೆರೆ ಗ್ರಾಮದ ಬಳಿ ವೇದಾವತಿ ನದಿಗೆ ಕೊಂಡೊಯ್ಯುತ್ತಾರೆ.ಆಗ ಕಿಲಾರಿಗಳು ದೇವರ ದನಗಳನ್ನು ಹೊಡೆದುಕೊಂಡು ಹೋಗುವ ಪದ್ಧತಿ ಇದೆ.

ರಾತ್ರಿ 8.30ಕ್ಕೆ ಬೆಳ್ಳಿ-ಬಂಗಾರ ಅಭರಣ ಮತ್ತು ವಿವಿಧ ಹೂವು, ಹೊಂಬಾಳೆಯಿಂದ ಅಲಂಕರಿಸಿದ ದೈವಗಳ ಪೆಟ್ಟಿಗೆಯನ್ನು ಭಕ್ತರು ಹೊತ್ತು ಉರುಮೆ ವಾದ್ಯಗಳೊಂದಿಗೆ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸುತ್ತಾರೆ. ನಂತರ ಆ ದೈವಗಳನ್ನು ಗುಡಿ ತುಂಬಿಸುವುದು, ಅಕ್ಕಿ ಅಳೆಯುವ ಕಾರ್ಯ ನಡೆಯುತ್ತಾರೆ.

ಬುಡಕಟ್ಟು ಸಂಸ್ಕತಿಯನ್ನು ಬಿಂಬಿಸುವ ಸಾಂಸ್ಕೃತಿಕ ವೀರರ ಹಬ್ಬ, ಆಚರಣೆ, ಜಾತ್ರೆ ಮತ್ತು ಮಹೋತ್ಸವಗಳು ಜನಪದ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿವೆ. ಹಾಗಾಗಿ ಸಾಂಸ್ಕೃತಿಕ ಆಚರಣೆಯನ್ನು ಡಿಜಿಟಲೀಕರಣದ ಮೂಲಕ ದಾಖಲಿಸುವ ಕಾರ್ಯ ನಡೆಯಬೇಕಿದೆ ಎನ್ನುತ್ತಾರೆ ವಿದ್ವಾಂಸ ಡಾ.ಎಂ.ಎಸ್. ಮುತ್ತಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.