ADVERTISEMENT

ವಿಧಾನಸಭಾ ಚುನಾವಣೆ: ನೂರು ಕ್ಷೇತ್ರಗಳಲ್ಲಿ ಸ್ಪರ್ಧೆ

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 13:32 IST
Last Updated 2 ಫೆಬ್ರುವರಿ 2023, 13:32 IST
ಮಹಿಮಾ ಪಟೇಲ್‌
ಮಹಿಮಾ ಪಟೇಲ್‌   

ಚಿತ್ರದುರ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗರಿಷ್ಠ 100 ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧೆ ಮಾಡಲಿದೆ. ಪ್ರಾಮಾಣಿಕ ಹಾಗೂ ಯೋಗ್ಯ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್‌ ತಿಳಿಸಿದರು.

‘ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಪಕ್ಷದ ಅಪೇಕ್ಷೆ. ಆದರೆ, ಪ್ರಾಮಾಣಿಕ ಹಾಗೂ ಸಮರ್ಥ ಅಭ್ಯರ್ಥಿ ಸಿಗುವುದು ಕಷ್ಟವಾಗಿದೆ. ಹಣ, ಹೆಂಡ ಹಂಚದೇ ಜನಸೇವೆ ಮಾಡುವ ಇಚ್ಛೆ ಹೊಂದಿದ ಯೋಗ್ಯರನ್ನು ಮಾತ್ರ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜಕಾರಣ ಸಂಪೂರ್ಣ ಕಲುಷಿತಗೊಂಡಿದೆ. ರಾಜಕಾರಣದ ಅರಿವೇ ಇಲ್ಲದವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ಬಾಂಧವ್ಯ ಹದಗೆಟ್ಟು ಹೋಗಿದೆ. ರಾಜಕೀಯ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ಮುಳುಗಿದ್ದಾರೆ. ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ರಾಜಕೀಯ ತಿಳಿವಳಿಕೆ ಹೊಂದಿದ, ಸಮಾಜವಾದಿ ಚಿಂತನೆ ಇರುವ ಹಾಗೂ ನಡೆ–ನುಡಿ ಶುದ್ಧವಾಗಿರುವವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದು. ಪಕ್ಷದ ನಿರೀಕ್ಷೆಗೆ ಅನುಗುಣವಾಗಿ ಅಭ್ಯರ್ಥಿಗಳು ಲಭ್ಯವಾಗದೇ ಇದ್ದರೆ ಅಂತಹ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗುವುದಿಲ್ಲ. ಪ್ರಾಮಾಣಿಕ ಅಭ್ಯರ್ಥಿಗಳು ಎಲ್ಲಿ ಸಿಗುತ್ತಾರೆ ಅಂತಹ ಕ್ಷೇತ್ರದಲ್ಲಿ ಮಾತ್ರ ಕಣಕ್ಕೆ ಇಳಿಸಲಾಗುವುದು’ ಎಂದು ವಿವರಿಸಿದರು.

‘ಮತದಾರರಿಗೆ ಆಮಿಷವೊಡ್ಡುವ ಅಭ್ಯರ್ಥಿಗಳು ಹಣವನ್ನು ಎಲ್ಲಿಂದ ತರುತ್ತಾರೆ ಎಂಬುದನ್ನು ಅರಿಯಬೇಕು. ಹಣ ಖರ್ಚು ಮಾಡಿ ಆಯ್ಕೆಯಾದವರು ಹಣ ಸಂಪಾದಿಸಲು ಮುಂದಾಗುತ್ತಾರೆ. ಇದಕ್ಕೆ ಮತದಾರರು ಅವಕಾಶ ಮಾಡಿಕೊಡಬಾರದು. ಅಭ್ಯರ್ಥಿಯಾಗುವವರು ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವಷ್ಟು ಹಣ ಹೊಂದಿದ್ದರೆ ಸಾಕು’ ಎಂದರು.

‘ರಾಜಕಾರಣ ಜನಸೇವೆಯೇ ಹೊರತು ಉದ್ಯಮವಲ್ಲ. ಚುನಾವಣೆಯಲ್ಲಿ ಬಂಡವಾಳ ಹೂಡಿಕೆ ಮಾಡಿ ಲಾಭ ಪಡೆಯುವ ಉದ್ಯಮ ರಾಜಕಾರಣವಲ್ಲ. ಸಮಾಜವಾದಿ ಸಿದ್ಧಾಂತ ಹೊಂದಿದ್ದ ತಂದೆ ಜೆ.ಎಚ್‌.ಪಟೇಲ್‌, ಚುನಾವಣೆ ಮುಗಿದ ಬಳಿಕ ಕೃಷಿ ಕೆಲಸ ಮಾಡುವಂತೆ ಸೂಚನೆ ನೀಡುತ್ತಿದ್ದರು. ಈಗಿನ ರಾಜಕಾರಣಿಗಳಿಗೆ ಉದ್ಯೋಗವೇ ಇಲ್ಲ. ರಾಜಕಾರಣವೇ ಉದ್ಯೋಗ ಎಂಬಂತೆ ಭಾವಿಸಿದ್ದಾರೆ’ ಎಂದು ಕುಟುಕಿದರು.

‘ಸಹೋದರ ತೇಜಸ್ವಿ ಪಟೇಲ್‌ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದೇ ಕುಟುಂಬದಲ್ಲಿ ಇಬ್ಬರು ಸ್ಪರ್ಧೆ ಮಾಡುವುದು ಸರಿಕಾಣುವುದಿಲ್ಲ. ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೆ ಸ್ಪರ್ಧೆಯಿಂದ ನಾನು ಹಿಂದೆ ಸರಿಯುತ್ತೇನೆ. 2024ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಜೆಡಿಯು ವಕ್ತಾರ ರಮೇಶ್‌ಗೌಡ, ಮುಖಂಡರಾದ ರವಿ, ಶಿವರಾಂ, ನಾಗೇಶ್, ಶಿವಮೂರ್ತಿ ಇದ್ದರು.

***

ಹಾದಿ–ಬೀದಿ ರಂಪ ಮಾಡುವುದು ರಾಜಕಾರಣವಲ್ಲ. ಇದೊಂದು ಸೇವಾ ಕ್ಷೇತ್ರ. ಕ್ರಿಮಿನಲ್‌ಗಳಂತೆ ಮಾತನಾಡುವವರು ಜೈಲಿನಲ್ಲಿರಬೇಕೆ ಹೊರತು ರಾಜಕಾರಣದಲ್ಲಿ ಅಲ್ಲ.
ಮಹಿಮಾ ಪಟೇಲ್‌, ಅಧ್ಯಕ್ಷ, ಜೆಡಿಯು ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.