
ಚಿತ್ರದುರ್ಗ: ಸುಗ್ಗಿ ಸಂಭ್ರಮ, ಸೂರ್ಯ ದೇವನ ಆರಾಧನೆಯ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ನಡೆಸಿದ್ದಾರೆ. ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಬುಧವಾರ ಜೋರಾಗಿತ್ತು.
ಕ್ಯಾಲೆಂಡರ್ ವರ್ಷಾರಂಭದ ಮೊದಲ ಹಬ್ಬವನ್ನು ಅರ್ಥಪೂರ್ಣವಾಗಿ ಸ್ವಾಗತಿಸಲು ಜಿಲ್ಲೆಯ ಜನರು ಸಜ್ಜಾಗಿದ್ದಾರೆ. ಮಾರುಕಟ್ಟೆಯಲ್ಲಿ ಕಬ್ಬು, ಎಳ್ಳುಬೆಲ್ಲ, ಕುಂಬಳಕಾಯಿ, ಪೂಜಾ ಸಾಮಾಗ್ರಿ ಖರೀದಿ ಇದನ್ನು ಸಾಕ್ಷೀಕರಿಸಿತು.
ಬುಧವಾರ ಬೆಳಿಗ್ಗೆಯಿಂದಲೇ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ನಗರದ ಗಾಂಧಿವೃತ್ತ, ಚಳ್ಳಕೆರೆ ಟೋಲ್ ಗೇಟ್, ಸಂತೆಹೊಂಡ, ವೈಶಾಲಿ ಕ್ರಾಸ್, ಮೇದೆಹಳ್ಳಿ ರಸ್ತೆ, ಜೆಸಿಆರ್ ಮುಖ್ಯ ರಸ್ತೆಯಲ್ಲಿ ಕಬ್ಬು ಖರೀದಿಗೆ ಜನರು ಮುಗಿಬಿದ್ದಿದ್ದರು.
ಪ್ರತಿ ವರ್ಷ ಮಾರುಕಟ್ಟೆಗೆ ಚಿತ್ರದುರ್ಗದ ಕುರುಬರಹಳ್ಳಿ, ಚನ್ನಗಿರಿ, ಹಾಸನದಿಂದ ಕಬ್ಬು ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಶಿವಮೊಗ್ಗದಿಂದ ಟನ್‌ಗಟ್ಟಲೆ ಕಬ್ಬು ಬಂದಿಳಿದಿದೆ. ಮಂಗಳವಾರ ರಾತ್ರಿಯಿಂದಲೇ ಬಂದು ಮಾರುಕಟ್ಟೆಯಲ್ಲಿ ಶಿವಮೊಗ್ಗ ಕಬ್ಬು ಆವರಿಸಿದೆ. ತಿಳಿ ಕೆಂಪು ಬಣ್ಣ, ರುಚಿಯಲ್ಲಿ ಒಂದು ಕೈ ಮೇಲಿರುವ ಕಾರಣ ಜನರ ಮನ ಸೆಳೆದಿದೆ. ಇದರಿಂದಾಗಿ ಸ್ಥಳೀಯ ಕಬ್ಬಿಗೆ ಕೊಂಚ ಬೇಡಿಕೆ ಕುಸಿದಿದೆ. ಒಂದು ಕೋಲು ₹ 50ರಿಂದ ₹60, ಸ್ಥಳೀಯ ಕಬ್ಬು ₹ 40ರಿಂದ ₹ 50ಕ್ಕೆ ಮಾರಾಟ ಮಾಡುತ್ತಿದ್ದದ್ದು ಕಂಡು ಬಂದಿತು.
ಕಬ್ಬು, ಸಜ್ಜೆ, ಜೋಳದ ರೊಟ್ಟಿ, ಶೇಂಗಾ ಪುಡಿ, ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆ ಬೀಜ, ಹುರಿಗಡಲೆಗಳ ಮಿಶ್ರಣವನ್ನು ದೇವರಿಗೆ ಸಮರ್ಪಿಸಲು ಮನೆಗಳಲ್ಲಿ ಮಹಿಳೆಯರು ಸಿದ್ಧತೆ ನಡೆಸಿದರು. ಎಳ್ಳು – ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು, ಕಬ್ಬು, ಕಡಲೆ ಕಾಯಿ, ಗೆಣಸು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗ್ರಾಮೀಣ ಸೊಗಡಿನ ಸಂಕ್ರಾಂತಿ ನಗರದಲ್ಲಿಯೂ ತನ್ನ ಹಿಂದಿನ ಸಂಪ್ರದಾಯ ಉಳಿಸಿಕೊಂಡು ಬಂದಿದೆ. ಹೀಗಾಗಿ ಹಿಂದಿನಂತೆಯೇ ಈ ಹಬ್ಬದಲ್ಲೂ ಹೊಸ ಮಡಕೆ ಖರೀದಿಸಿ ಒಲೆ ಹಚ್ಚಿ ಪೊಂಗಲ್ ತಯಾರಿಸುತ್ತಾರೆ. ಇದರಿಂದಾಗಿ ಮಡಕೆಗಳಿಗೂ ಮಾರುಕಟ್ಟೆಯಲ್ಲಿ ಕೊಂಚ ಬೇಡಿಕೆ ಕಂಡುಬಂತು. ಇದರ ಜತೆಗೆ ರಾಸುಗಳನ್ನು ಸಿಂಗರಿಸಲು ವಿವಿಧ ವಸ್ತುಗಳನ್ನು ಖರೀದಿಸಲು ರೈತರು ಮುಂದಾದರು. ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂದಿತು. ಸೇವಂತಿಗೆ, ಬಟನ್ ರೋಸ್‌ಗೆ ಬೇಡಿಕೆ ಹೆಚ್ಚಾಗಿತ್ತು.
ಮೇಲುದುರ್ಗದ ಏಕನಾಥೇಶ್ವರಿ ದೇವಸ್ಥಾನ, ಗಣಪತಿ, ಶ್ರೀ ಸಂಪಿಗೆ ಸಿದ್ದೇಶ್ವರ ಸ್ವಾಮಿ, ದೊಡ್ಡಪೇಟೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಸ್ಥಾನ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಸ್ಥಾನ, ಗೌರಸಂದ್ರ ಮಾರಮ್ಮ, ಜೋಗಿಮಟ್ಟಿ ರಸ್ತೆಯ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ನಗರ ಪೊಲೀಸ್ ಠಾಣೆ ಆವರಣದ ಕಣಿವೆ ಮಾರಮ್ಮ, ಬುರುಜನಹಟ್ಟಿಯ ಹಟ್ಟಿ ಮಾರಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ಸೇರಿದಂತೆ ವಿವಿಧ ದೇಗುಲಗಳನ್ನು ಹೂವು, ಮಾವಿನಸೊಪ್ಪಿನ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮುಂಜಾನೆಯಿಂದ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಗಳು ಪ್ರಾರಂಭವಾಗಲಿವೆ. ಭಕ್ತರಿಗೆ ಪ್ರಸಾದ ನೀಡಲು ಸಿದ್ಧತೆ ನಡೆದಿವೆ.
ಐಯುಡಿಪಿಯಲ್ಲಿ ಸಂಕ್ರಾಂತಿ ಸಂಭ್ರಮ
ನಗರದ ಐಯುಡಿಪಿ ಬಡಾವಣೆಯಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ಇಡೀ ಬಡಾವಣೆ ಕಳೆಗಟ್ಟಲಿದ್ದು ದಿನಪೂರ್ತಿ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ನಡೆಯಲಿವೆ. ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಜಾನಪದ ನೃತ್ಯ ಗಾಯನ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ಸಂಸ್ಕೃತಿಕ ಚಿಂತಕ ಬಂಜಗೆರೆ ಜಯಪ್ರಕಾಶ್ ಸಂಭ್ರಮ ಉದ್ಘಾಟಿಸಲಿದ್ದು ಮಡಿಲು ಸ್ವಾವಲಂಬಿ ಟ್ರಸ್ಟ್ ಸಂಸ್ಥಾಪಕಿ ಆರುಂಧತಿ ಉರಗ ತಜ್ಞೆ ಸ್ಫೂರ್ತಿ ಸಾಕ್ಷಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.