ADVERTISEMENT

ಆಸ್ತಿಗಾಗಿ ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ

ಅಣ್ಣನ ಮಗನನ್ನು ಕೊಲೆಗೈದ ಸಹೋದರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 9:52 IST
Last Updated 6 ಮಾರ್ಚ್ 2020, 9:52 IST
   

ಚಿತ್ರದುರ್ಗ: ಸಹೋದರರ ಆಸ್ತಿ ಕಲಹಕ್ಕೆ ಬೋಸೆದೇವರಹಟ್ಟಿಯ ಬಾಲಕ ಗೋವಿಂದ (8) ಬಲಿಯಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಬಾಲಕನನ್ನು ಕೊಲೆ ಮಾಡಿ ಮೃತದೇಹವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದ ಚಿಕ್ಕಪ್ಪ ಚಿರಂಜೀವಿ (24) ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.

ಚಳ್ಳಕೆರೆ ತಾಲ್ಲೂಕಿನ ಬೋಸೆದೇವರಹಟ್ಟಿಯ ರಂಗಪ್ಪ ಅವರ ಪುತ್ರ ಗೋವಿಂದ ಮಾರ್ಚ್‌ 4ರಂದು ಕಾಣೆಯಾಗಿದ್ದನು. ಗ್ರಾಮದ ಹಳ್ಳದ ಸಮೀಪದ ಜಮೀನಿನಲ್ಲಿ ಗುರುವಾರ ಸಂಜೆ ಬಾಲಕನ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

‘ಬಾಲಕ ಗೋವಿಂದ ಅವರ ತಂದೆ ರಂಗಪ್ಪ ಹಾಗೂ ಆರೋಪಿ ಚಿರಂಜೀವಿ ಸಹೋದರರು. ಜಗಲು ಪಾಪಯ್ಯನ ಮೂವರು ಪುತ್ರರಲ್ಲಿ ಚಿರಂಜೀವಿ ಇನ್ನೂ ಅವಿವಾಹಿತ. ಉಳಿದ ಇಬ್ಬರಿಗೆ ಮದುವೆಯಾಗಿದ್ದು, ರಂಗಪ್ಪನಿಗೆ ಪುತ್ರಿ ಹಾಗೂ ಪುತ್ರ ಇದ್ದರು. ಮತ್ತೊಬ್ಬ ಸಹೋದರನಿಗೆ ಮಕ್ಕಳಾಗಿರಲಿಲ್ಲ. ಮೂರು ಜನ ಸಹೋದರರ ನಡುವೆ ಆಸ್ತಿ ಕಲಹ ನಡೆಯುತ್ತಿತ್ತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಅನಾರೋಗ್ಯದಿಂದ ಬಳಲುತ್ತಿದ್ದ ಚಿರಂಜೀವಿ ಚಿಕಿತ್ಸೆಗೆ ಮನೆಯಲ್ಲಿ ಪದೇ ಪದೇ ಹಣ ಕೇಳುತ್ತಿದ್ದನು. ಇದಕ್ಕೆ ಕುಟುಂಬದಲ್ಲಿ ಸರಿಯಾದ ಸ್ಪಂದನೆ ಸಿಗದ ಕಾರಣಕ್ಕೆ ಆಸ್ತಿಯಲ್ಲಿ ಪಾಲು ನೀಡುವಂತೆ ಬೇಡಿಕೆ ಇಟ್ಟಿದ್ದನು. ಪಿತ್ರಾರ್ಜಿತವಾಗಿ ಬಂದಿದ್ದ 9 ಎಕರೆ ಭೂಮಿಯನ್ನು ಮಕ್ಕಳಿಗೆ ಹಂಚಲು ಜಗಲು ಪಾಪಯ್ಯ ನಿರಾಕರಿಸಿದ್ದರು. ಮೊಮ್ಮಗ ಗೋವಿಂದನ ಹೆಸರಿಗೆ ಆಸ್ತಿ ಬರೆಯುವುದಾಗಿ ಕಿರಿಯ ಪುತ್ರನಿಗೆ ಬೆದರಿಕೆ ಹಾಕಿದ್ದರು’ ಎಂದು ವಿವರಿಸಿದರು.

ಬಾಲಕನ್ನು ಮುಗಿಸಲು ಸಂಚು:ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗೋವಿಂದನ ಮೇಲೆ ಚಿರಂಜೀವಿ ಹಗೆ ಸಾಧಿಸತೊಡಗಿದ್ದನು. ಬಾಲಕನನ್ನು ಕೊಲೆ ಮಾಡಿದರೆ ಆಸ್ತಿಯನ್ನು ಕಬಳಿಸಬಹುದು ಎಂಬ ಲೆಕ್ಕಾಚಾರ ಹಾಕಿದ್ದನು. ಕುಟುಂಬದಲ್ಲಿ ಜಗಳ ನಡೆದಾಗ ಕೋಪದಲ್ಲಿ ಈ ವಿಚಾರವನ್ನು ಬಾಯಿಬಿಟ್ಟಿದ್ದನು. ‘ಗೋವಿಂದನೇ ಇಲ್ಲದಿದ್ದರೆ ಆಸ್ತಿ ಯಾರ ಹೆಸರಿಗೆ ಬರೆಯುತ್ತೀಯಾ’ ಎಂದು ತಂದೆಯನ್ನು ಪ್ರಶ್ನಿಸಿದ್ದನು. ಈ ಮಾತು ಆರೋಪಿಯನ್ನು ಕಂಬಿಹಿಂದೆ ತಳ್ಳಿದೆ.

‘ಮಾರ್ಚ್‌ 4ರಂದು ಸಂಜೆ ಶಾಲೆಯಿಂದ ಬಂದ ಬಾಲಕನಿಗೆ ಪಾರಿವಾಳ ಹಾರಿಸುವ ಆಸೆ ತೋರಿಸಿದ್ದನು. ಜಮೀನಿನಲ್ಲಿರುವ ಮನೆಯ ಹಿಂಭಾಗಕ್ಕೆ ಕರೆದೊಯ್ದು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದನು. ಮೃತದೇಹವನ್ನು ಗೊಬ್ಬರದ ಚೀಲದಲ್ಲಿ ತುಂಬಿ ಸಮೀಪದ ಹಳ್ಳಕ್ಕೆ ಬಿಸಾಡಿದ್ದನು’ ಎಂದು ರಾಧಿಕಾ ತಿಳಿಸಿದರು.

ಬೆಂಗಳೂರಿಗೆ ಪರಾರಿ:‘ಕೃತ್ಯ ಎಸಗಿದ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದನು. ಪೈಲ್ಸ್‌ ಕಾಯಿಲೆಗೆ ಚಿಕಿತ್ಸೆ ಪಡೆಯಲು ಹೋಗುತ್ತಿರುವುದಾಗಿ ಪೋಷಕರಿಗೆ ಮಾಹಿತಿ ನೀಡಿದ್ದನು. ರಾತ್ರಿಯಾದರೂ ಮನೆಗೆ ಬಾರದ ಬಾಲಕನಿಗೆ ಕುಟುಂಬದ ಸದಸ್ಯರು ಹುಡುಕಾಟ ನಡೆಸಿದ್ದರು. ಬಾಲಕ ಕಾಣೆಯಾಗಿರುವುದಕ್ಕೆ ಸಂಬಂಧಿಸಿದಂತೆ ಮಾರ್ಚ್‌ 5ರಂದು ಮಧ್ಯಾಹ್ನ 3ಕ್ಕೆ ನಾಯಕನಹಟ್ಟಿ ಠಾಣೆಗೆ ದೂರು ನೀಡದ್ದರು’ ಎಂದು ಹೇಳಿದರು.

‘ಪೋಷಕರಿಗೆ ಚಿರಂಜೀವಿಯ ಮೇಲೆ ಅನುಮಾನ ಬಂದು ಪ್ರಶ್ನಿದಾಗ ಮೃತದೇಹದ ಸುಳಿವು ನೀಡಿದ್ದನು. ಹಳ್ಳಕ್ಕೆ ತೆರಳಿ ಪರಿಶೀಲಿಸಿದಾಗ ಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನಿಖೆಯ ದಿಕ್ಕುತಪ್ಪಿಸಲು ಸೃಷ್ಟಿಸಿದ್ದ ದಾಖಲೆಗಳನ್ನು ಮುಂದಿಟ್ಟಿದ್ದನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಕ್ಕೆ ಬಿಲ್ಲುಗಳನ್ನು ಪಡೆದು ತಂದಿದ್ದನು. ಕೊಲೆ ಪ್ರಕರಣದಲ್ಲಿ ಬಾಲಕನ ಅಜ್ಜಿಯನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದ್ದನು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.