ADVERTISEMENT

ಅ.9ರಂದು ‘ನಮ್ಮ ನಡಿಗೆ ಸ್ವಾಮೀಜಿ ಕಡೆಗೆ’

ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 13:45 IST
Last Updated 27 ಸೆಪ್ಟೆಂಬರ್ 2022, 13:45 IST
ಮಾರಸಂದ್ರ ಮುನಿಯಪ್ಪ
ಮಾರಸಂದ್ರ ಮುನಿಯಪ್ಪ   

ಚಿತ್ರದುರ್ಗ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ವರದಿಯನ್ನು ಕೂಡಲೇ ಜಾರಿಗೊಳಿಸದಿದ್ದರೆ ಅ.9 ರಂದು ಸರ್ಕಾರದಿಂದ ನಡೆಯುವ ವಾಲ್ಮೀಕಿ ಜಯಂತಿ ಬಹಿಷ್ಕರಿಸಿ ‘ನಮ್ಮ ನಡಿಗೆ ಸ್ವಾಮೀಜಿ ಕಡೆಗೆ’ ಆಂದೋಲನ ನಡೆಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು.

‘ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವಂತೆ ನಾಗಮೋಹನ್‌ ದಾಸ್‌ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷ ಕಳೆದಿದೆ. ವರದಿ ಜಾರಿಗೆ ಆಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 230 ದಿನದಿಂದ ಧರಣಿ ನಡೆಸುತ್ತಿದ್ದಾರೆ. ಆದರೂ, ಸರ್ಕಾರ ನಿರ್ಲಕ್ಷ್ಯ ತೋರಿದೆ’ ಎಂದುಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಧರಣಿಗೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ 9 ಮಠದ ಸ್ವಾಮೀಜಿ ಹಾಗೂ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಅ.9 ರೊಳಗೆ ಮೀಸಲಾತಿ ಘೋಷಿಸದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ’ ಎಂದು ತಿಳಿಸಿದರು.

ADVERTISEMENT

‘ಎರಡು ತಿಂಗಳ ಹಿಂದೆ ರಾಜ್ಯಾದ್ಯಂತ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ ಕಾರಣ 33 ಸಾವಿರ ಕಾರ್ಮಿಕರನ್ನು ಕಾಯಂಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಮುಖ್ಯಮಂತ್ರಿಗಳು 11 ಸಾವಿರ ಜನರನ್ನು ಮಾತ್ರ ಖಾಯಂಗೊಳಿಸಿ ವಚನ ಭ್ರಷ್ಟರಾಗಿದ್ದಾರೆ. ವಾರದೊಳಗೆ ಉಳಿದವರನ್ನು ಕಾಯಂಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಚಕ್ರವರ್ತಿ, ರಾಜ್ಯ ಕಾರ್ಯದರ್ಶಿ ಎನ್‌.ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.