ADVERTISEMENT

ಆದರ್ಶಮಯ ಜೀವನದಿಂದ ಸಮಾಜ ಸುಧಾರಣೆ

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:24 IST
Last Updated 6 ಆಗಸ್ಟ್ 2021, 3:24 IST
ಚಿತ್ರದುರ್ಗದ ಮುರುಘಾಮಠದಲ್ಲಿ ಗುರುವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ನವ ವಧು–ವರರಿಗೆ ಶಿವಮೂರ್ತಿ ಮುರುಘಾ ಶರಣರು ಆಶೀರ್ವದಿಸಿದರು
ಚಿತ್ರದುರ್ಗದ ಮುರುಘಾಮಠದಲ್ಲಿ ಗುರುವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ನವ ವಧು–ವರರಿಗೆ ಶಿವಮೂರ್ತಿ ಮುರುಘಾ ಶರಣರು ಆಶೀರ್ವದಿಸಿದರು   

ಚಿತ್ರದುರ್ಗ: ‘ಸದಾ ಹಣದ ಆಸೆಗೆ ಒಳಗಾಗಬಾರದು. ಆದರ್ಶಮಯ ಜೀವನ ಅಳವಡಿಸಿಕೊಂಡರೆ ಸಮಾಜ ಸುಧಾರಣೆ ಆಗಲಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಮುರುಘಾಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ನಿಂದ ಗುರುವಾರ ನಡೆದ 31ನೇ ವರ್ಷದ 8ನೇ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಸಾಕಷ್ಟು ಧರ್ಮಗಳು, ಶಾಸ್ತ್ರಗಳು, ಮೌಲ್ಯಗಳಿವೆ. ಅವುಗಳಿಗೆ ಎಂದಿಗೂ ಕೊರತೆ ಇಲ್ಲ. ಆದರೆ, ತತ್ವ, ಮೌಲ್ಯ, ಸಿದ್ಧಾಂತವನ್ನು ಬೋಧನೆಗೆ ಸೀಮಿತಗೊಳಿಸಿಕೊಂಡು ಆದರ್ಶ ಮರೆತಿರುವ ಕಾರಣ ಸಮಾಜದಲ್ಲಿ ಅನೈತಿಕತೆಯನ್ನು ನೋಡುತ್ತಿದ್ದೇವೆ. ಆದರ್ಶದ ಪ್ರಮಾಣ ಹೆಚ್ಚಾದರೆ ಬದಲಾವಣೆ ಖಂಡಿತ ಕಾಣಬಹುದು’ ಎಂದರು.

ADVERTISEMENT

‘ಶರಣ–ಶರಣೆಯರು ಇಡೀ ಬದುಕನ್ನು ಆದರ್ಶದ ಹಾದಿಗೆ ಬಳಸಿಕೊಂಡರು. ಅವರೆಲ್ಲರಲ್ಲಿ ಅನೇಕ ರೀತಿಯ ಕಾಯಕ ವರ್ಗದವರು ಇದ್ದರು. ಅವರು ಆದರ್ಶವನ್ನೇ ಉಸಿರಾಗಿಸಿಕೊಂಡಿದ್ದರು. ಇದರಿಂದಾಗಿ ಆದರ್ಶ ಸಮಾಜ ಅನಾವರಣ
ಗೊಂಡಿತ್ತು. ಆದ್ದರಿಂದ ಭ್ರಮೆಯನ್ನು ಬದಿಗಿಟ್ಟು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಬದುಕನ್ನು ಕಟ್ಟಿಕೊಳ್ಳಬೇಕು. ದುಡಿಮೆಯೇ ದೇವರೆಂದು ಕಾಯಕದ ಆದರ್ಶ ಪಾಲಿಸಬೇಕು. ಇದರಿಂದ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು’ ಎಂದು ಸಲಹೆ
ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಅವಿನ್, ‘ಪ್ರಸ್ತುತ ದಿನಗಳಲ್ಲಿ ಆಧುನಿಕತೆ, ತಂತ್ರಜ್ಞಾನದ ದಾಸರಾಗಿದ್ದೇವೆ. ನೈತಿಕತೆ ಅಧಃಪತನವಾಗುತ್ತಿದೆ. ಬದುಕು ಅಪಮೌಲ್ಯವಾಗುತ್ತಿದೆ. ಮಾನವರು ತಮ್ಮ ಪಥ ಬದಲಿಸಿ ಹೋಗುತ್ತಿರುವ ಸಂದರ್ಭದಲ್ಲಿ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸವನ್ನು ಮಠಾಧೀಶರು ಮಾಡುತ್ತಿದ್ದಾರೆ. ಅದರಲ್ಲಿ ಶರಣರು ಒಬ್ಬರಾಗಿದ್ದಾರೆ’ ಎಂದು ಹೇಳಿದರು.

‘ಸಮಾಜದಲ್ಲಿ ವೈಚಾರಿಕ ದೃಷ್ಟಿಕೋನ ಕಡಿಮೆಯಾಗುತ್ತಿದೆ. ತೋರಿಕೆಯನ್ನೇ ಅನೇಕರು ಸಾಧನೆ ಎಂದುಕೊಂಡಿದ್ದಾರೆ. ವೈಚಾರಿಕ ಪ್ರಜ್ಞೆ ಮೌಢ್ಯ ಹೋಗಲಾಡಿಸಿ, ಸರಿ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ. ಈ ಕೆಲಸವನ್ನು ಶರಣರು ಮಾಡುತ್ತಿದ್ದಾರೆ. ಆಡಂಬರದ ಬದಲು ಸರಳ ಸಾಮೂಹಿಕ ವಿವಾಹಕ್ಕೆ ಒತ್ತು ನೀಡಿದ್ದಾರೆ. ಆಷಾಢ ಮಾಸದಲ್ಲಿಯೂ ಇಲ್ಲಿ ಮದುವೆ ಆಗುತ್ತಿರುವುದು ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿದೆ’ ಎಂದರು.

ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಇದೇ ವೇಳೆ ಎನ್‌ಎಂಎಂಎಸ್ ಪರೀಕ್ಷೆ ಪಾಸಾದ ಪ್ರತಿಭಾವಂತ ವಿದ್ಯಾರ್ಥಿನಿ ಸಿ.ಜಿ. ಸಂಜನಾ ಅವರನ್ನು ಸನ್ಮಾನಿಸಲಾಯಿತು. ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಪೈಲ್ವಾನ್ ತಿಪ್ಪೇಸ್ವಾಮಿ, ಎನ್. ತಿಪ್ಪಣ್ಣ, ಹಾಲಪ್ಪ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.