ADVERTISEMENT

ಚಿತ್ರದುರ್ಗ| ಗಣಿತ ಗಣಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ: ಸಿಇಒ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:28 IST
Last Updated 14 ಜನವರಿ 2026, 7:28 IST
ಡಾ.ಎಸ್‌.ಆಕಾಶ್‌
ಡಾ.ಎಸ್‌.ಆಕಾಶ್‌   

ಚಿತ್ರದುರ್ಗ: ‘ಮಕ್ಕಳಲ್ಲಿ ಗಣಿತ ಕಲಿಕೆಗೆ ಉತ್ತೇಜನ ನೀಡುವ ಮತ್ತು ಅವರಲ್ಲಿನ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ರೂಪಿಸಿರುವ ಗಣಿತ ಗಣಕ ವಿಶೇಷ ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ತೋರಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್‌.ಆಕಾಶ್ ತಿಳಿಸಿದ್ದಾರೆ.

‘ನವೆಂಬರ್‌ ಮೊದಲ ವಾರದಲ್ಲೇ ಜಿಲ್ಲೆಯ ಶಿಕ್ಷಕರಿಗೆ ತರಬೇತಿ ನೀಡಲಾಗಿತ್ತು. ಇತರ ಜಿಲ್ಲೆಗಳಿಗಿಂತ ಮುಂಚಿತವಾಗಿ ಕಾರ್ಯಕ್ರಮ ಆರಂಭಿಸಲಾಯಿತು. ಜಿಲ್ಲೆಯ 151 ಕ್ಲಸ್ಟರ್‌ ವ್ಯಾಪ್ತಿಯ 1,586 ಶಾಲೆಗಳ 2,400ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂದಾಜು 9,000 ವಿದ್ಯಾರ್ಥಿಗಳು ಕಾರ್ಯಕ್ರಮದ ಲಾಭ ಪಡೆದಿದ್ದಾರೆ’ ಎಂದು ತಿಳಿಸಿದ್ದಾರೆ.

‘ಗಣಿತ ಗಣಕವು ಸರ್ಕಾರದ ಪ್ರಮಾಣಾಧಾರಿತ ಪ್ರಮುಖ ಕಾರ್ಯಕ್ರಮವಾಗಿದ್ದು, 2024– 25ನೇ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಮೂಲ ಸಂಖ್ಯಾಜ್ಞಾನವನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೊಂಡಿದೆ. ಇದು ಒಂದು ವಿಶಿಷ್ಟ ದೂರವಾಣಿ ಆಧಾರಿತ ಟ್ಯೂಟರಿಂಗ್‌ ಕಾರ್ಯಕ್ರಮವಾಗಿದ್ದು, ಸರ್ಕಾರಿ ಶಾಲಾ ಶಿಕ್ಷಕರು 3, 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಮ್ಮೆ ಒನ್‌– ಟು– ಒನ್‌ ಫೋನ್ ಆಧಾರಿತ ಟ್ಯೂಟರಿಂಗ್ ಕರೆಗಳನ್ನು ನಡೆಸುತ್ತಾರೆ. ಈ ಕರೆಗಳು ಪೋಷಕರ ಸಮ್ಮುಖದಲ್ಲೇ ನಡೆಯುವುದು ವಿಶೇಷ’ ಎಂದು ವಿವರಿಸಿದ್ದಾರೆ.

ADVERTISEMENT