
ಚಿತ್ರದುರ್ಗ: ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಆದರೂ ಇಲ್ಲಿಯವರೆಗೆ ಜಿಲ್ಲಾಡಳಿತ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಿಲ್ಲ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೆಕ್ಕೆಜೋಳ ಬೆಲೆ ಕುಸಿದಿರುವ ಕಾರಣ ಬೆಂಬಲಬೆಲೆ ಯೋಜನೆಯಡಿ ಖರೀದಿ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ. ಸರ್ಕಾರ ಈ ಕುರಿತು ನಿರ್ಧಾರ ಪ್ರಕಟಿಸಿದೆ. ಆದರೂ ಜಿಲ್ಲಾಡಳಿತ ಖರೀದಿ ಕೇಂದ್ರ ಸ್ಥಾಪನೆ ಮಾಡದೆ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ. ಹಣದ ಅನಿವಾರ್ಯತೆ ಇರುವ ಕಾರಣ ರೈತರು ಉತ್ಪನ್ನ ಇಟ್ಟುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಸಕಾಲದಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಯಾವುದೇ ಮಿತಿ ಇಲ್ಲದೇ ಮೆಕ್ಕೆಜೋಳ ಖರೀದಿ ಮಾಡಬೇಕು. ಎಲ್ಲಾ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ತೆರೆದು ರೈತರ ಆರ್ಥಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಈ ವೇಳೆಗಾಗಲೇ ಸರ್ಕಾರ ಈ ಕೆಲಸ ಮಾಡಬೇಕಾಗಿತ್ತು. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿಲ್ಲ. ಎಲ್ಲಾ ತಾಲ್ಲೂಕುಗಳಲ್ಲಿ ರೈತ ಮುಖಂಡರು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ರೈತರ ಮನವಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಶೇಂಗಾ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದರೂ ಬೆಳೆ ಪರಿಹಾರ ನೀಡಿಲ್ಲ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ಕೂಡ ಹಾಳಾಗಿದೆ. ಆದರೂ ಬೆಳೆ ಪರಿಹಾರ ಮತ್ತು ಬೆಳೆ ವಿಮೆಯನ್ನು ನೀಡಿಲ್ಲ. ಈರುಳ್ಳಿ ಬೆಲೆ ಕುಸಿತದಿಂದ ಕಂಗಲಾಗಿರುವ ರೈತರಿಗೆ ಸರ್ಕಾರ ನೆರವು ನೀಡಬೇಕು. ಸರ್ಕಾರವೇ ಖರೀದಿ ಮಾಡಬೇಕು. ರೈತರ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2022–23ನೇ ಸಾಲಿನ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಪರಿಹಾರ ಮೊತ್ತವನ್ನು ನಿಜವಾದ ಫಲಾನುಭವಿಗಳ ಬದಲು, ಬೇನಾಮಿ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಬೇನಾಮಿ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣವನ್ನು ಜಮಾ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬೇನಾಮಿ ಖಾತೆಗಳಿಗೆ ಪರಿಹಾರದ ಹಣ ಹೋಗುತ್ತಿರುವುದು ಆತಂಕಕಾರಿಯಾಗಿದೆ. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ನಿಜವಾದ ರೈತರಿಗೆ ಪರಿಹಾರದ ಹಣವನ್ನು ಜಮಾ ಮಾಡಲು ಕೂಡಲೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಕಬ್ಬಿಗೆರೆ ನಾಗರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಬಾಗೇನಾಳ ತಿಪ್ಪೇಸ್ವಾಮಿ, ನಿಜಲಿಂಗಪ್ಪ, ರಾಮ್ ರೆಡ್ಡಿ, ಶಿವಮೂರ್ತಿ ಮಂಜುನಾಥ್, ಪ್ರವೀಣ, ಮಲ್ಲೇಶ್, ಸಂಜೀವಪ್ಪ, ಸದಾಶಿವ, ಮಾರುತಿ, ಕಲ್ಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.