ADVERTISEMENT

ವಿಶಾಲ ಸ್ಥಳದಲ್ಲಿ ವೈದ್ಯಕೀಯ ಕಾಲೇಜು

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:38 IST
Last Updated 12 ಮೇ 2022, 4:38 IST
ಮೊಳಕಾಲ್ಮುರಿನಲ್ಲಿ ನಡೆಯುತ್ತಿರುವ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ಬುಧವಾರ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವೀಕ್ಷಿಸಿದರು.
ಮೊಳಕಾಲ್ಮುರಿನಲ್ಲಿ ನಡೆಯುತ್ತಿರುವ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ಬುಧವಾರ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವೀಕ್ಷಿಸಿದರು.   

ಮೊಳಕಾಲ್ಮುರು: ಚಿತ್ರದುರ್ಗಕ್ಕೆ ಮಂಜೂರಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜನ್ನು ವಿಶಾಲ ಪ್ರದೇಶದಲ್ಲಿ ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ಕೇಂದ್ರ ಸಚಿವಎ. ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ವಿವಿಧ ಕಾಮಗಾರಿಗಳ ವೀಕ್ಷಣೆ, ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ರಾಜ್ಯ ಪ್ರವಾಸ ಮಾಡಿದಾಗ ಕೆಲ ಜಿಲ್ಲೆಗಳಲ್ಲಿ ನೂರಾರು ಎಕರೆಯಷ್ಟು ವಿಶಾಲ ಸ್ಥಳದಲ್ಲಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಆದರೆ ಚಿತ್ರದುರ್ಗದಲ್ಲಿ ಈಗಿರುವ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾಲೇಜು ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿದೆ. ಇದು ತೀರಾ ಇಕ್ಕಟ್ಟಾಗುವ ಸಾಧ್ಯತೆಯಿದ್ದು, ವಿಶಾಲ ಸ್ಥಳದಲ್ಲಿ ನಿರ್ಮಿಸಿದಲ್ಲಿ ಅನುಕೂಲವಾಗಲಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿದ್ದು, ಶೀಘ್ರ ಮುಖ್ಯಮಂತ್ರಿ, ವೈದ್ಯಕೀಯ ಸಚಿವರ ಜತೆ ಚರ್ಚೆ ನಡೆಸಲಾಗುವುದು. ಸರ್ಕಾರಿ ಭೂಮಿ ಹುಡುಕಲಾಗುವುದು, ಲಭ್ಯವಾಗದಿದ್ದಲ್ಲಿ ಖಾಸಗಿ ಭೂಮಿ ಖರೀದಿ ಮಾಡಬಹುದುಎಂದು ಹೇಳಿದರು.

ADVERTISEMENT

ತುಮಕೂರು- ದಾವಣಗೆರೆ ನೇರ ರೈಲು ಮಾರ್ಗಕ್ಕೆ ಸಂಬಂಧಪಟ್ಟಂತೆ ಅಗತ್ಯ ಭೂಮಿ ಪೈಕಿ ಶೇ 40ರಷ್ಟು ಸ್ವಾಧೀನ ಪೂರ್ಣಗೊಂಡಿದೆ. ₹ 901ಕೋಟಿ ಅನುದಾನ ಮಂಜೂರಾಗಿದೆ. ಭೂ ಸ್ವಾಧೀನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಶೀಘ್ರ ಕಾಮಗಾರಿಯ ಭೂಮಿಪೂಜೆ ಮಾಡಲಾಗುವುದು ಎಂದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಶೀಘ್ರ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ. ಹಣಕಾಸು ಇಲಾಖೆ ಅನುಮೋದನೆಸಿಕ್ಕಿದ್ದು ಸಚಿವ ಸಂಪುಟ ಅನುಮೋದನೆ ಮಾತ್ರ ಬಾಕಿಯಿದೆ. ಅತಿ ಶೀಘ್ರ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಕೆಲ ತಾಂತ್ರಿಕ ಕಾರಣದಿಂದಾಗಿಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ₹ 30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮುಖ್ಯರಸ್ತೆ ವೀಕ್ಷಿಸಿದ ಸಚಿವರು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಪಟ್ಟಣವ್ಯಾಪ್ತಿಯಲ್ಲಿ ಕಾರ್ಯ ವಿಳಂಬವಾಗುತ್ತಿದ್ದು, ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದಿದೆ. ಆದಷ್ಟು ಬೇಗ ಕಾರ್ಯ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಇದಕ್ಕೂ ಮೊದಲು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ತಮ್ಮ ಇಲಾಖೆಯಿಂದಐಎಎಸ್, ಐಒಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಶೋಷಿತ ಸಮುದಾಯಗಳ 3 ಸಾವಿರ ಜನರಿಗೆ ಈ ವರ್ಷ ಉಚಿತ ತರಬೇತಿ ನೀಡಲಾಗಿದೆ. ಈಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದುಹೇಳಿದರು.

ಆರಂಭದಲ್ಲಿ ರಾಂಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಐತಿಹಾಸಿಕ ನುಂಕಿಮಲೆ ಬೆಟ್ಟಕ್ಕೆ ಭೇಟಿ ನೀಡಿ ಸಿದ್ದೇಶ್ವರ ಸ್ವಾಮಿದರ್ಶನ ಪಡೆದು ನೂತನ ರಥ ವೀಕ್ಷಿಸಿದರು.

ತದ ನಂತರ ಪಟ್ಟಣದ ಪದ್ಮಶಾಲಿ ಸಮುದಾಯ ಭವನ ಲೋಕಾರ್ಪಣೆ ಕಾರ್ಯದಲ್ಲಿ ಭಾಗವಹಿಸಿ
ದ್ದರು. ಪಿಎಂಜಿಎಸ್ ವೈ ಯೋಜನೆಯಲ್ಲಿ ನಿರ್ಮಿಸಿರುವ ಬಿ.ಜಿ. ಕೆರೆ- ಕಾಕೋಬಯ್ಯನಹಟ್ಟಿ ರಸ್ತೆ ಕಾಮಗಾರಿಯನ್ನು ಸಚಿವ ನಾರಾಯಣಸ್ವಾಮಿ ವೀಕ್ಷಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಇ.ರಾಮರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಟಿ. ನಾಗೀರೆಡ್ಡಿ, ಕಿರಣ್ ಗಾಯಕ್‌ವಾಡ್ ಇದ್ದರು.

ಬಳಿಕತಾಲೂಕಿನ ರಾಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರ‍್ರೇನಹಳ್ಳಿ ಗ್ರಾಮದ ಎಸ್ಸಿ ಕಾಲೊನಿಗೆ ಭೇಟಿ ನೀಡಿದ ಸಚಿವರು ಗ್ರಾಮಸ್ಥರ ಕುಂದುಕೊರತೆ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.