ADVERTISEMENT

ಪೂರೈಕೆಯಾಗದ ಔಷಧ: ರೋಗಿಗಳ ಪರದಾಟ

ಚಿಕ್ಕಜಾಜೂರು ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆ

ಜೆ.ತಿಮ್ಮಪ್ಪ
Published 23 ಡಿಸೆಂಬರ್ 2022, 6:27 IST
Last Updated 23 ಡಿಸೆಂಬರ್ 2022, 6:27 IST
ಚಿಕ್ಕಜಾಜೂರು ಸಮೀಪದ ಹೋಬಳಿ ಕೇಂದ್ರವಾದ ಬಿ. ದುರ್ಗದ ಸಮುದಾಯ ಆರೋಗ್ಯ ಕೇಂದ್ರ.
ಚಿಕ್ಕಜಾಜೂರು ಸಮೀಪದ ಹೋಬಳಿ ಕೇಂದ್ರವಾದ ಬಿ. ದುರ್ಗದ ಸಮುದಾಯ ಆರೋಗ್ಯ ಕೇಂದ್ರ.   

ಚಿಕ್ಕಜಾಜೂರು: ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಚಿಕ್ಕಜಾಜೂರು ಹಾಗೂ ಸಮೀಪದ ಮುತ್ತುಗದೂರು (ತರಳಬಾಳು ನಗರ) ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೋಬಳಿ ಕೇಂದ್ರವಾದ ಬಿ. ದುರ್ಗದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಎರಡು ತಿಂಗಳುಗಳಿಂದ ಸಮರ್ಪಕವಾಗಿ ಔಷಧ ಪೂರೈಕೆ ಆಗದ್ದರಿಂದ ರೋಗಿಗಳು ಪರದಾಡುವಂತಾಗಿದೆ.

ಚಿಕ್ಕಜಾಜೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಕಾಯಂ ವೈದ್ಯರು ಮತ್ತು ಒಂದು ವರ್ಷದ ಅವಧಿಗೆ ವೈದ್ಯರೊಬ್ಬರನ್ನು ಸರ್ಕಾರ ನೇಮಿಸಿದೆ. ಆಸ್ಪತ್ರೆ ವ್ಯಾಪ್ತಿಯಲ್ಲಿ ಚಿಕ್ಕಜಾಜೂರು ವ್ಯಾಪ್ತಿಯ ಆರು ಉಪ ಆರೋಗ್ಯ ಕೇಂದ್ರಗಳಿವೆ. ಆಸ್ಪತ್ರೆ ವ್ಯಾಪ್ತಿಗೆ 34 ಹಳ್ಳಿಗಳ 35,000 ಜನಸಂಖ್ಯೆ ಇದೆ. ಇವರೆಲ್ಲ ಇಲ್ಲಿನ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಹೊಳಲ್ಕೆರೆಯ ತಾಲ್ಲೂಕು ಆಸ್ಪತ್ರೆಯನ್ನು ಹೊರತು ಪಡಿಸಿದರೆ, ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಹೆಚ್ಚು ಹೊರ ರೋಗಿಗಳು ನಿತ್ಯ ಬರುತ್ತಾರೆ. ಇಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಮಾತ್ರೆ, ಡೈಕ್ಲೊ ಗುಳಿಗೆ ಮತ್ತು ಚುಚ್ಚುಮದ್ದು, ಪ್ಯಾರಸಿಟಮಲ್‌, ಡ್ರಿಪ್‌ ಸೆಟ್‌, ಡಿಎನ್‌ಎಸ್‌, ಎನ್‌.ಎಸ್‌. ಡೈಕ್ಲೊವಿನ್‌ ಡೆರಿಫಿಲಿನ್‌ ಆರ್‌ಎಲ್‌, ಸಿಪಿಎಂ ಇಂಜಕ್ಷನ್‌, ಟಿಟಿ ಇಂಜಕ್ಷನ್‌ಗಳು ಮೂರ್ನಾಲ್ಕು ತಿಂಗಳುಗಳಿಂದ ಸರಬರಾಜಾಗಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ
ತಿಳಿಸಿದ್ದಾರೆ.

ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮುತ್ತುಗದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 9 ಉಪ ಆರೋಗ್ಯ ಕೇಂದ್ರಗಳು, 31 ಹಳ್ಳಿಗಳಿಂದ 26,000 ಜನಸಂಖ್ಯೆ ಇದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು ದಂತ ವೈದ್ಯರು, ಗ್ರಾಮೀಣ ಸೇವೆಗೆ ಒಂದು ವರ್ಷದ ಅವಧಿಗೆ ನಿಯೋಜನೆಗೊಂಡ ವೈದ್ಯರೊಬ್ಬರು ಇದ್ದಾರೆ. ಮುತ್ತುಗದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯರಿದ್ದಾರೆ. ಕೆಲವು ಸಮಯದಲ್ಲಿ ಅದರಲ್ಲೂ ರಾತ್ರಿ ವೇಳೆ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಕೊನೆಗೆ ನರ್ಸ್‌ಗಳಿಂದ ಚಿಕಿತ್ಸೆ ಪಡೆದು ಬರುವುದು ಅನಿವಾರ್ಯವಾಗಿದೆ.

ADVERTISEMENT

ಎಆರ್‌ಎಸ್‌ ಫಂಡ್‌ನಿಂದ ಔಷಧ ಖರೀದಿ: ‘ಔಷಧ ಪೂರೈಕೆ ಇಲ್ಲದಿರುವುದರಿಂದ ಪ್ರತಿ ಹೊರ ರೋಗಿಗಳಿಂದ ಸಂಗ್ರಹಿಸುವ ₹ 2 ಹಾಗೂ ಆರೋಗ್ಯ ರಕ್ಷಾ ಸಮಿತಿ ಫಂಡ್‌ನ ಖಾತೆಯಿಂದ ಹಣವನ್ನು ಬಿಡಿಸಿಕೊಂಡು, ಶಿವಮೊಗ್ಗದ ಔಷಧ ಅಂಗಡಿಗಳಿಂದ ತರಿಸಿ, ರೋಗಿಗಳಿಗೆ ವಿತರಿಸಲಾಗುತ್ತಿದೆ’ ಎಂದು ಬಿ. ದುರ್ಗ ಗ್ರಾಮದ ನಿವೃತ್ತ ಸೈನಿಕ ಬಿ.ಎಂ. ನಾಗರಾಜ್‌ ಹಾಗೂ ಹೆಸರು ಬಹಿರಂಗಪಡಿಸಲು ಇಚ್ಛಿಸದ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ
ನೀಡಿದರು.

ಅವಧಿ ಮುಗಿದ ಔಷಧ: ಆಸ್ಪತ್ರೆಯೊಂದರಲ್ಲಿ ಅವಧಿ ಮುಗಿದ ಔಷಧಗಳನ್ನು ಹೊರಗೆ ಇಟ್ಟಿರುವುದು ಈಚೆಗೆ ಕಂಡುಬಂದಿದೆ. ಇದರಲ್ಲಿ ಕೆಲವು ಅವಶ್ಯಕವಾಗಿದ್ದರೂ ವಿತರಣೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಇಷ್ಟಾದರೂ ಆರೋಗ್ಯ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಹರಿಸದಿರುವುದು ಸಾರ್ವಜನಿಕರಲ್ಲಿ ಸೋಜಿಗ ಮೂಡಿಸಿದೆ.

ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ, ಎಲ್ಲ ಆಸ್ಪತ್ರೆಗಳಿಗೆ ಸರಬರಾಜು ಕ್ರಮ ಕೈಗೊಂಡು, ರೋಗಿಗಳಿಗೆ ಅಗತ್ಯ ಔಷಧ ಲಭ್ಯವಾಗುವಂತೆ ನೋಡಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

.............

15–20 ದಿನಗಳೊಳಗೆ ಔಷಧ ಪೂರೈಕೆ

ಕೆಲವು ಔಷಧಗಳ ಪೂರೈಕೆ ಸ್ಥಗಿತವಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಬಳಿ ಈ ಕುರಿತು ಚರ್ಚಿಸಿದ್ದೇವೆ. ಗುರುವಾರ ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದೇವೆ. ಔಷಧ ತರಿಸಲು ಆರೋಗ್ಯ ಇಲಾಖೆಯ ಫಂಡ್‌ ಅನ್ನು ನೀಡಿ, ಎಲ್ಲ ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸಲು ಅನುಮತಿ ನೀಡುವಂತೆ ಕೋರಲಾಗಿದೆ. ಇನ್ನು 15–20 ದಿನಗಳ ಒಳಗೆ ಎಲ್ಲ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅವಶ್ಯ ಇರುವಷ್ಟು ಔಷಧಗಳನ್ನು ಸರಬರಾಜು ಮಾಡಲಾಗುವುದು.ಅವಧಿ ಮುಗಿದ ಔಷಧಗಳ ಬಗ್ಗೆ ಸಂಬಂಧಪಟ್ಟ ಆರೋಗ್ಯ ಕೇಂದ್ರದ ವೈದ್ಯರಿಂದ ಮಾಹಿತಿ ಪಡೆಯಲಾಗುವುದು.

– ಡಾ. ರವಿಕುಮಾರ್‌, ಹೊಳಲ್ಕೆರೆ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.