ADVERTISEMENT

ಹಿರಿಯೂರು: 2 ಸಾವಿರ ವರ್ಷ ಹಿಂದಿನ ಮೆಗಾಲಿಥಿಕ್ ಸಂಸ್ಕೃತಿ ಕಾಲದ ಸಮಾಧಿ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:04 IST
Last Updated 7 ಸೆಪ್ಟೆಂಬರ್ 2025, 2:04 IST
ಹಿರಿಯೂರು ತಾಲ್ಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಉಪನ್ಯಾಸಕ ಮಹೇಶ್ ಕುಂಚಿಗನಾಳ್ ನೇತೃತ್ವದ ತಂಡ ಪತ್ತೆ ಹಚ್ಚಿರುವ 2 ಸಾವಿರ ವರ್ಷಗಳಷ್ಟು ಹಿಂದಿನದ್ದು ಎನ್ನಲಾದ ಶಿಲಾ ಸಮಾಧಿ
ಹಿರಿಯೂರು ತಾಲ್ಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಉಪನ್ಯಾಸಕ ಮಹೇಶ್ ಕುಂಚಿಗನಾಳ್ ನೇತೃತ್ವದ ತಂಡ ಪತ್ತೆ ಹಚ್ಚಿರುವ 2 ಸಾವಿರ ವರ್ಷಗಳಷ್ಟು ಹಿಂದಿನದ್ದು ಎನ್ನಲಾದ ಶಿಲಾ ಸಮಾಧಿ   

ಹಿರಿಯೂರು: ತಾಲ್ಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ನಡೆಸುವಾಗ ಅಂದಾಜು 2,000 ವರ್ಷಗಳ ಹಿಂದಿನ ಮೆಗಾಲಿಥಿಕ್ ಸಂಸ್ಕೃತಿ ಕಾಲದ ಬೃಹತ್ ಶಿಲಾ ಸಮಾಧಿಯನ್ನು ಉಪನ್ಯಾಸಕ ಮಹೇಶ್ ಕುಂಚಿಗನಾಳ್ ನೇತೃತ್ವದ ತಂಡ ಪತ್ತೆ ಹಚ್ಚಿದೆ.

‘ಸಮಾಧಿಯನ್ನು ಸ್ಥಳೀಯವಾಗಿ ಸಿಗುವ ವೃತ್ತಾಕಾರದ ಕಾಡುಗಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಸಮಾಧಿಯ ಒಂದು ಪಾರ್ಶ್ವದಲ್ಲಿ ಕಾಡುಗಲ್ಲಿನ ಅಂದಾಜು ಐದಾರು ಅಡಿ ಎತ್ತರದ ನಿಲುವುಗಲ್ಲುಗಳನ್ನು ನಿಲ್ಲಿಸಲಾಗಿದೆ. ಸಮಾಧಿಯು 15 ಅಡಿ ವ್ಯಾಸ ಹೊಂದಿದೆ. ಕಲ್ಲು ಕತ್ತರಿಸಲು ಪಳಗಿದ್ದ ಕಬ್ಬಿಣ ಯುಗದ ಮಾನವರು ನಿರ್ಮಿಸಿದ ಡಾಲ್‌ಮನ್ ಮಾದರಿಯ ಸಿಸ್ಟ್ ಸಮಾಧಿಯಂತೆ ಇದು ಇದೆ’ ಎಂದು ಮಹೇಶ್ ಅಭಿಪ್ರಾಯಪಟ್ಟಿದ್ದಾರೆ. 

ಸಮಾಧಿಗಳ ಒಳಗೆ ಮಾನವ ಅಸ್ತಿಯ ಕುಡಿಕೆ ಇದ್ದ ಕುರುಹುಗಳು ಸಿಕ್ಕಿರುವುದನ್ನು ಉತ್ಖನನಕಾರರು ಗುರುತಿಸಿದ್ದಾರೆ. ಸಮಾಧಿಯು ಜನವಸತಿಯ ಸಮೀಪದಲ್ಲಿಯೇ ಇದ್ದು, ಇದರ ಸನಿಹದಲ್ಲಿ 12ನೇ ಶತಮಾನಕ್ಕೆ ಸೇರಿದ ಕಾಳಿಯ ಗುಡಿ ಇದೆ. ಧಾರ್ಮಿಕ ಕೇಂದ್ರದ ಹತ್ತಿರ ಸಮಾಧಿ ಇರುವುದು ಧಾರ್ಮಿಕ ದೃಷ್ಟಿಯಿಂದ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಸಮಾಧಿ ಸಮೀಪದಲ್ಲಿ ವಿಜಯನಗರ ಅರಸರ ಕಾಲದ ಹನುಮನ ಶಿಲಾಮೂರ್ತಿ ಹಾಗೂ ಎರಡು ವೀರಗಲ್ಲುಗಳಿವೆ. ಹಾಳೂರು ಎಂದು ಕರೆಯುವ ಈ ಊರು ಪ್ರಸ್ತುತ ಬೇಚರಾಕ್ ಗ್ರಾಮವಾಗಿದೆ. ಅಂತ್ಯಕ್ರಿಯೆ ನಡೆದ ಸ್ಥಳವನ್ನು ಗುರುತಿಸಲು ನಿಲುವುಗಲ್ಲುಗಳನ್ನು ನಿಲ್ಲಿಸಲಾಗಿದೆ. ಕಲ್ಲಿನ ಮುಚ್ಚಳಗಳನ್ನು ನಿಧಿಗಳ್ಳರು ಹೊರತೆಗೆದಿದ್ದಾರೆ. ಎತ್ತರ, ಗಾತ್ರದಲ್ಲಿ ಒಂದು ಸಮಾಧಿ ಮತ್ತೊಂದು ಸಮಾಧಿಗೆ ಭಿನ್ನವಾಗಿದೆ.

ಕ್ಷೇತ್ರ ಕಾರ್ಯದಲ್ಲಿ ಪ್ರಬುದ್ಧ, ಪ್ರತ್ಯುಷ್ಯ ಮತ್ತು ಲಕ್ಷ್ಮೀಶ ನೆರವಾಗಿದ್ದರು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.