ADVERTISEMENT

ನಿತ್ಯ ಕಲ್ಯಾಣ ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ತಾಯಂದಿರು ಮಕ್ಕಳಿಗೆ ಬಸವತತ್ವ ತಿಳಿಸಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:24 IST
Last Updated 14 ಆಗಸ್ಟ್ 2021, 13:24 IST
ಚಿತ್ರದುರ್ಗದಲ್ಲಿ ಮುರುಘಾಮಠದಿಂದ ನಡೆದ ನಿತ್ಯ ಕಲ್ಯಾಣ ಐದನೇ ದಿನದ ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಶಿವಮೂರ್ತಿ ಮುರುಘಾ ಶರಣರು, ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಇದ್ದರು.
ಚಿತ್ರದುರ್ಗದಲ್ಲಿ ಮುರುಘಾಮಠದಿಂದ ನಡೆದ ನಿತ್ಯ ಕಲ್ಯಾಣ ಐದನೇ ದಿನದ ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಶಿವಮೂರ್ತಿ ಮುರುಘಾ ಶರಣರು, ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಇದ್ದರು.   

ಚಿತ್ರದುರ್ಗ: ‘ಬಸವತತ್ವ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಆದ್ದರಿಂದ ತಾಯಂದಿರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಬಸವ ಅನುಯಾಯಿ ಆಗುವಂತೆ ಮಾಡಬೇಕು’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಲಹೆ ನೀಡಿದರು.

ಐಯುಡಿಪಿ ಬಡಾವಣೆಯಲ್ಲಿ ಇರುವ ವಕೀಲ ಪಾತ್ಯರಾಜನ್ ಮನೆಯಲ್ಲಿ ಮುರುಘಾಮಠದಿಂದ ನಡೆದ ‘ನಿತ್ಯ ಕಲ್ಯಾಣ’ ಐದನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನೇಕರು ಹೆಣ್ಣು, ಹೊನ್ನು, ಮಣ್ಣಿಗೆ ಬೆನ್ನತ್ತಿ ಹೋಗುತ್ತಿದ್ದಾರೆ. ಮಾನವರ ದುಃಖಕ್ಕೆ ಅತಿಯಾಸೆಯೇ ಬಹುಮುಖ್ಯ ಕಾರಣವಾಗಿದೆ. ಇದರಿಂದ ಹೊರಬರಲು ಬಸವಣ್ಣನ ಮಾರ್ಗ ಅನುಸರಿಸಬೇಕಿದೆ. ಜಾತೀಯತೆ ಬದಿಗಿಟ್ಟು ಸಮಾನರಾಗಿ ಬದುಕಬೇಕಿದೆ. ಕಾಯಕ ತತ್ವದ ಅಡಿ ಆರ್ಥಿಕವಾಗಿ ಪ್ರಬಲವಾದ ಸಮಾಜ ನಿರ್ಮಿಸಬೇಕಿದೆ’ ಎಂದರು.

ADVERTISEMENT

ಶಿವಮೂರ್ತಿ ಮುರುಘಾ ಶರಣರು, ‘ಸತ್ಯ, ಅಹಿಂಸಾ ಮಾರ್ಗದಲ್ಲಿ ಸಾಗುವ ಜ್ಞಾನವೇ ತತ್ವಜ್ಞಾನವಾಗಿದೆ. ಇದು ಶಾಶ್ವತ ಶಾಂತಿ ಮತ್ತು ಸಮಾಧಾನ ನೀಡಲಿದೆ. ಸಂಶೋಧಕರು, ಅನ್ವೇಷಕರು, ವಿಜ್ಞಾನಿಗಳು ತತ್ವಜ್ಞಾನಿಯಾಗಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಉದಾತ್ತವಾದ ಸಂವಿಧಾನದಲ್ಲೂ ತತ್ವಜ್ಞಾನವಿದೆ. ಇದರ ಹಾದಿಯಲ್ಲಿ ಸಾಗಿದವರು ಜೀವನದಲ್ಲಿ ಅತ್ಯಂತ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಇಡೀ ಸಮಾಜದ ತಪ್ಪನ್ನು ಸರಿಪಡಿಸುವ ಶಕ್ತಿ ಸಾಮರ್ಥ್ಯ ತತ್ವಜ್ಞಾನಕ್ಕೆ ಇದೆ’ ಎಂದು ಅಭಿಪ್ರಾಯಪಟ್ಟರು.

ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ‘ಅನ್ಯರಿಗೆ ಸ್ಪಂದಿಸುವುದೇ ಸುಜ್ಞಾನಿಗಳ ಲಕ್ಷಣವಾಗಿದೆ. ತಾರತಮ್ಯ ಮೆಟ್ಟಿ ನಿಲ್ಲುವ ಶಕ್ತಿಯೂ ಇದಕ್ಕೆ ಇದೆ. ಮಾನವರೆಲ್ಲರೂ ಒಂದೇ ಎಂಬ ಭೇದ–ಭಾವ ಇಲ್ಲದೇ ಸನ್ಮಾರ್ಗವೇ ತತ್ವಜ್ಞಾನ. ಇವೆರಡು ಮಾನವರ ಬದುಕಿಗೆ ದಾರಿದೀಪ ಇದ್ದಂತೆ’ ಎಂದರು.

ಬಾಗಲಕೋಟೆಯ ಸತ್ತಿ ಸ್ವಾಮೀಜಿ, ರೆವರೆಂಡ್ ಫಾದರ್ ಸಿ. ಜಾರ್ಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.