ADVERTISEMENT

ಶಾಸಕಿ ಕಾರು ಡಿಕ್ಕಿ: ವ್ಯಕ್ತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 5:07 IST
Last Updated 22 ಫೆಬ್ರುವರಿ 2019, 5:07 IST
   

ಚಿತ್ರದುರ್ಗ: ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಸೇರಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಬ್ದುಲ್‌ ರೆಹೆಮಾನ್‌ ಸಾಬ್‌ (51) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಲೆಗೆ ಬಿದ್ದ ಬಲವಾದ ಏಟು ಬಿದ್ದ ಪರಿಣಾಮ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದಾವಣಗೆರೆಗೆ ಸ್ಥಳಾಂತರಿಸಲಾಗಿದೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಕುತ್ತುತಂದ ಆರೋಪದಡಿ (ಐಪಿಸಿ 279, 337) ಕಾರು ಚಾಲಕ ಮಲ್ಲಿಕಾರ್ಜುನ್‌ ವಿರುದ್ಧ ಹಿರಿಯೂರು ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹಿಂಬದಿಯಿಂದ ಡಿಕ್ಕಿ:ಹಿರಿಯೂರು ಪ್ರವಾಸಿ ಮಂದಿರದಲ್ಲಿ ಶಾಸಕರು ಗುರುವಾರ ಮಧ್ಯಾಹ್ನ ಅಧಿಕಾರಿಗಳ ಸಭೆ ಕರೆದಿದ್ದರು. ಫಾರ್ಚುನರ್‌ ಕಾರಿನಲ್ಲಿ ಬಂದ ಪೂರ್ಣಿಮಾ ಅವರು ಪ್ರವಾಸಿ ಮಂದಿರ ಪ್ರವೇಶಿಸಿದ್ದಾರೆ. ಕಾರನ್ನು ನಿಲುಗಡೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಬಲಬದಿಯ ಪಿಲ್ಲರ್‌ ಬಳಿ ನಿಂತಿದ್ದ ರೆಹಮಾನ್‌ ಸಾಬ್‌ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಶಾಸಕರು ಕಾರಿನಲ್ಲಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಅಪಘಾತ ಪ್ರಕರಣವನ್ನು ಅಲ್ಲಗಳೆದಿರುವ ಶಾಸಕಿ ಪೂರ್ಣಿಮಾ, ‘ಪ್ರವಾಸಿ ಮಂದಿರಕ್ಕೆ ತೆರಳಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಗಮನಿಸಿದೆ. ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿ ಸಭೆಗೆ ತೆರಳಿದೆ. ಕೆಲ ಹೊತ್ತಿನ ಬಳಿಕ ಗುಂಪೊಂದು ಗಲಾಟೆ ಆರಂಭಿಸಿತು. ಸಭೆಯಿಂದ ಹೊರಗೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಚಿಕಿತ್ಸೆ ವಿಳಂಬ:ಅಪಘಾತ ಮಧ್ಯಾಹ್ನ 1 ಗಂಟೆಗೆ ಸಂಭವಿಸಿದರೂ ಗಾಯಾಳುವಿಗೆ ಸಂಜೆ 7 ಗಂಟೆಯವರೆಗೂ ಚಿಕಿತ್ಸೆ ಸಿಗಲಿಲ್ಲ. ನೋವಿನಿಂದ ಬಳಲುತ್ತಿದ್ದ ಅವರನ್ನು ನಿಯಂತ್ರಿಸಲು ವಿಫಲರಾದ ಆರೋಗ್ಯ ಇಲಾಖೆ ಸಿಬ್ಬಂದಿ, ಕೈಕಾಲುಗಳನ್ನು ಬೆಡ್‌ಗೆ ಕಟ್ಟಿಹಾಕಿದ್ದರು.

‘ಅಪಘಾತ ಸಂಭವಿಸಿದ ಬಳಿಕ ಶಾಸಕರು ಕನಿಷ್ಠ ಮಾನವೀಯತೆ ತೋರಿಲ್ಲ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಕೂಡ ಮಾಡಿಲ್ಲ. ವ್ಯಕ್ತಿಯ ಜೀವಕ್ಕೆ ಬೆಲೆ ಇಲ್ಲವೇ’ ಎಂದು ರೆಹಮಾನ್‌ ಅವರ ಅಳಿಯ ದಸ್ತಗಿರಿ ಸಾಬ್‌ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.