ADVERTISEMENT

ಶಾಸಕ ಎಂ.ಚಂದ್ರಪ್ಪ ಸಚಿವರಾಗುವುದು ನಿಶ್ಚಿತ

ಹೊಳಲ್ಕೆರೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:09 IST
Last Updated 27 ಅಕ್ಟೋಬರ್ 2020, 4:09 IST
ಹೊಳಲ್ಕೆರೆಯಲ್ಲಿ ಸೋಮವಾರ ಬಿಜೆಪಿ ಮುಖಂಡ ವಿಜಯೇಂದ್ರ ಮಾತನಾಡಿದರು. ಶಾಸಕ ಎಂ.ಚಂದ್ರಪ್ಪ, ರಘುಚಂದನ್ ಇದ್ದರು.
ಹೊಳಲ್ಕೆರೆಯಲ್ಲಿ ಸೋಮವಾರ ಬಿಜೆಪಿ ಮುಖಂಡ ವಿಜಯೇಂದ್ರ ಮಾತನಾಡಿದರು. ಶಾಸಕ ಎಂ.ಚಂದ್ರಪ್ಪ, ರಘುಚಂದನ್ ಇದ್ದರು.   

ಹೊಳಲ್ಕೆರೆ: ಮುಂದಿನ ದಿನಗಳಲ್ಲಿ ಶಾಸಕ ಎಂ.ಚಂದ್ರಪ್ಪ ಸಚಿವರಾಗುವುದು ಖಚಿತ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಭರವಸೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು ಕಷ್ಟಕಾಲದಲ್ಲಿ ಇದ್ದಾಗ ಚಂದ್ರಣ್ಣ ಹೆಗಲಿಗೆ ಹೆಗಲು ಕೊಟ್ಟು ಧೈರ್ಯ ತುಂಬಿದ್ದಾರೆ. ಆಗ ಅವಧಿ ಮುಗಿಯದಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಠೆ ತೋರಿದ್ದಾರೆ. ಬಿಎಸ್‌ವೈ ಅವರ ಬಲಗೈ ಬಂಟ ಎಂದೇ ಹೆಸರಾಗಿರುವ ಚಂದ್ರಣ್ಣ ಅವರಿಗೆ ಸದ್ಯ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆ ನೀಡಲಾಗಿದೆ. ನಾಲ್ಕು ಬಾರಿ ಶಾಸಕರಾಗಿರುವ ಚಂದ್ರಣ್ಣ ಅವರಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನದ ಭಾಗ್ಯ ಒಲಿದು ಬರಲಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತದೆ ಎಂಬುದು ಊಹಪೋಹ ಮಾತ್ರ. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಸರ್ಕಾರ ಸುಭದ್ರವಾಗಿದ್ದು, ಯಡಿಯೂರಪ್ಪ ಸ್ವಚ್ಛ ಆಡಳಿತ ನೀಡುತ್ತಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೆಲಕಚ್ಚಲಿವೆ’ ಎಂದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿದರು. ವಿಜಯೇಂದ್ರ ಅವರು ಪಟ್ಟಣದ ಐತಿಹಾಸಿಕ ಜಡೆಗಣಪತಿಯ ದರ್ಶನ ಪಡೆದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್.ನವೀನ್, ಮಂಡಲ ಅಧ್ಯಕ್ಷ ಸಿದ್ದೇಶ್, ರಘುಚಂದನ್, ಸುರೇಶ ಸಿದ್ದಾಪುರ, ದಗ್ಗೆ ಶಿವಪ್ರಕಾಶ್, ಅರುಣ್, ರೂಪಾ ಸುರೇಶ್, ಜಗದೀಶ್, ಮುರುಗೇಶ್, ಅಶೋಕ್, ಬಸವರಾಜ ಯಾದವ್, ವೇದಮೂರ್ತಿ, ರಾಮಣ್ಣ, ಡಿ.ಸಿ.ಮೋಹನ್, ಮರುಳಸಿದ್ದಪ್ಪ, ಪ್ರವೀಣ್ ಇದ್ದರು.

***

ಬಿಎಸ್‌ವೈ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಮುಂದೆ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿಯಾಗಿ ನೋಡುವ ಆಸೆ ಇದೆ.

ಎಂ.ಚಂದ್ರಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.