ADVERTISEMENT

ಹೊಳಲ್ಕೆರೆ: 186 ಶಾಲಾ ಕೊಠಡಿ ನಿರ್ಮಾಣ; ಶಾಸಕ ಎಂ.ಚಂದ್ರಪ್ಪ

ನಗರಘಟ್ಟದಲ್ಲಿ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:41 IST
Last Updated 21 ಸೆಪ್ಟೆಂಬರ್ 2025, 7:41 IST
ಹೊಳಲ್ಕೆರೆ ತಾಲ್ಲೂಕಿನ ನಗರಘಟ್ಟದಲ್ಲಿ ಶಾಸಕ ಎಂ.ಚಂದ್ರಪ್ಪ ಶಾಲಾ ಕೊಠಡಿ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿದರು
ಹೊಳಲ್ಕೆರೆ ತಾಲ್ಲೂಕಿನ ನಗರಘಟ್ಟದಲ್ಲಿ ಶಾಸಕ ಎಂ.ಚಂದ್ರಪ್ಪ ಶಾಲಾ ಕೊಠಡಿ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿದರು   

ಹೊಳಲ್ಕೆರೆ: ತಾಲ್ಲೂಕಿನಲ್ಲಿ ವಿವಿಧ ಸರ್ಕಾರಿ ಶಾಲೆಗಳಿಗೆ 186 ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ನಗರಘಟ್ಟದಲ್ಲಿ ₹16.5 ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನಕ್ಕೆ ₹25 ಲಕ್ಷ ಅನುದಾನ ನೀಡಿದ್ದೇನೆ. ಜಾತ್ರೆಯ ಒಳಗೆ ಮುಖ್ಯರಸ್ತೆಯಿಂದ ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ತಾಳ್ಯ ಹೋಬಳಿಯ 11 ಶಾಲೆಗಳೂ ಸೇರಿದಂತೆ ತಾಲ್ಲೂಕಿನ 35 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿ ಆರಂಭಿಸಲಾಗಿದೆ. ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಆಗದ ಪಾಲಕರ ಅನುಕೂಲಕ್ಕಾಗಿ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದೆ ಎಂದರು.

ಪಟ್ಟಣದ ಎಂಎಂ ಸರ್ಕಾರಿ ಶಾಲೆಗೆ ಮೂರು ಬಸ್ ನೀಡಿದ್ದು, ಹೈಟೆಕ್ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಶಾಲೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಗಡಿಭಾಗದಲ್ಲಿರುವ ಉಪ್ಪರಿಗೇನಹಳ್ಳಿ ಸರ್ಕಾರಿ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಮೇಲ್ದೆರ್ಜೆಗೆ ಏರಿಸಲಾಗುವುದು. ಇನ್ನು ಒಂದು ತಿಂಗಳಲ್ಲಿ ಆ ಶಾಲೆಗೂ ಉಚಿತ ಬಸ್ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಯ್ಯ, ಮಾಜಿ ಅಧ್ಯಕ್ಷ ಪ್ರವೀಣ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕಳಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಶೇಖರಪ್ಪ, ಕರಿಯಪ್ಪ, ನಾಗರಾಜಪ್ಪ, ಶ್ರೀನಿವಾಸ್, ಸಿದ್ದಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.