ಚಿತ್ರದುರ್ಗ: ಮಳೆಯಿಂದ ಮನೆ ಕುಸಿದು ಹಾನಿಗೀಡಾಗಿರುವ ತಾಲ್ಲೂಕಿನ ಓಬಣ್ಣನಹಳ್ಳಿ ಗ್ರಾಮಕ್ಕೆ ಶಾಸಕ ಕೆ.ಸಿ. ವೀರೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ನಿವಾಸಿಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ವಿತರಣೆ ಮಾಡಿದರು.
ಮನೆಕುಸಿತದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ತಿಮ್ಮಯ್ಯ, ತಿಮ್ಮಕ್ಕ ಅವರನ್ನು ಶಾಸಕರು ಭೇಟಿ ಮಾಡಿ, ಸರ್ಕಾರದಿಂದ ಮನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ‘ಮಳೆಯಿಂದಾಗಿ ಕುಸಿಯುವ ಹಂತದಲ್ಲಿರುವ ಮನೆಗಳನ್ನು ಗುರುತಿಸಿ ಆ ನಿವಾಸಿಗಳಿಗೆ ಮನೆ ಮಂಜೂರಾತಿ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಕ್ಷೇತ್ರದ ಅಭಿವೃದ್ಧಿಗೋಸ್ಕರ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಅನುದಾನ ತರುವ ಕೆಲಸ ಮಾಡುತ್ತಿದ್ದೇನೆ. ಬಡವರಿಗೆ ಮನೆ ಮಂಜೂರು ಮಾಡುವುದು ನಮ್ಮ ಮೊದಲ ಆದ್ಯತೆ. ಈಗಾಗಲೇ ಶಾಸಕರ ಅನುದಾನದಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ’ ಎಂದರು.
‘ಗ್ರಾಮಗಳ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗುವುದು. ಯಾವುದೇ ಸಮಸ್ಯೆಗಳಿದ್ದರೂ ಗ್ರಾಮಸ್ಥರ ನೆರವಿಗೆ ಬರಲು ನಾನು ಸದಾ ಸಿದ್ಧನಿರುತ್ತೇನೆ’ ಎಂದು ಭರವಸೆ ನೀಡಿದರು.
ಗ್ರಾಮದಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ ಇಲ್ಲದ ಕಾರಣ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಕೂಡಲೇ ಚರಂಡಿ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ‘ಗ್ರಾಮಕ್ಕೆ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಮಾಡಲು ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು’ ಎಂದರು. ಈಶ್ವರ ದೇವಾಲಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸ್ಥಳದಲ್ಲೇ ₹ 5 ಲಕ್ಷ ಚೆಕ್ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಓಬಣ್ಣನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಓಬಳೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಗ್ರಾಮಸ್ಥರಾದ ವೆಂಕಟೇಶ್, ಹನುಮಂತಪ್ಪ, ತಿಮ್ಮಯ್ಯ, ರುದ್ರಪ್ಪ, ಚಂದ್ರಪ್ಪ, ರಮೇಶ್, ಈಶ್ವರ್, ಜಯಣ್ಣ, ಹನುಮಂತಪ್ಪ, ತಿಮ್ಮಪ್ಪ ನಾಗರಾಜ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.