ADVERTISEMENT

ಪರಿಹಾರ ಕಾರ್ಯಕ್ಕೆ ₹ 22 ಲಕ್ಷ ನೆರವು: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 13:24 IST
Last Updated 29 ಮಾರ್ಚ್ 2020, 13:24 IST
ಜಿ.ಎಚ್. ತಿಪ್ಪಾರೆಡ್ಡಿ.
ಜಿ.ಎಚ್. ತಿಪ್ಪಾರೆಡ್ಡಿ.   

ಚಿತ್ರದುರ್ಗ: ಕೊರೊನಾ ಸೋಂಕಿನಿಂದ ತತ್ತರಿಸಿದ ದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ನೆರವಾಗಿ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿದ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹಾಗೂ ಕಮ್ಮಾ ರೆಡ್ಡಿ ಜನಸಂಘ ₹ 22 ಲಕ್ಷ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

‘ರೆಡ್ಡಿ ಜನಸಂಘದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 5 ಲಕ್ಷ ಪರಿಹಾರದ ಚೆಕ್‌ ನೀಡಲಾಗಿದೆ. ಇನ್ನೂ ₹ 7 ಲಕ್ಷವನ್ನು ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗದಳ ಕೈಗೊಳ್ಳುವ ಸೇವಾ ಕಾರ್ಯಗಳಿಗೆ ನೀಡಲಾಗುತ್ತಿದೆ. ಶಾಸಕರ ನಿಧಿಯಿಂದ ₹ 10 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಭಾರತದ ಸ್ಥಿತಿ ಗಂಭೀರವಾಗಬಹುದು ಎಂದು ಅಂದಾಜಿಸಲಾಗಿದೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಬಡವರು, ಕೂಲಿಕಾರ್ಮಿಕರಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ. ಇವರ ನೆರವಿಗೆ ಧಾವಿಸುವ ಉದ್ದೇಶದಿಂದ ಧನಸಹಾಯ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಶುಶ್ರೂಷಕರು, ಪೊಲೀಸರು, ಪೌರ ಕಾರ್ಮಿಕರು, ಪತ್ರಿಕಾ ವಿತರಕರು ಸೇರಿ ಹಲವರು ಸೋಂಕು ನಿವಾರಣೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು ಸೇರಿ ಹಲವು ರಕ್ಷಣಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ₹ 7 ಲಕ್ಷದಲ್ಲಿ ಇವನ್ನು ಖರೀದಿಸಿ ವಿತರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ನೆರೆ ಹಾಗೂ ಭೂಕಂಪದ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಸಂಘಪರಿವಾರ ಸೇವೆಗೆ ಸಜ್ಜಾಗಿದೆ. ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಸಮರೋಪಾದಿಯಲ್ಲಿ ಕೆಲಸ ಮಾಡಲಿವೆ. ಮುಂದಿನ ತಿಂಗಳು ರೋಗ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ವೈದ್ಯಕೀಯ ಪರಿಕರಗಳೊಂದಿಗೆ ಕೊರೊನಾ ವಿರುದ್ಧ ಹೋರಾಡಲು ಇನ್ನಷ್ಟು ಸಜ್ಜಾಗಬೇಕಾಗಿದೆ’ ಎಂದರು.

ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಟಿ. ಬದರೀನಾಥ್, ‘ವಿಎಚ್‍ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ. ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸಲಿದ್ದಾರೆ. ಪೌರಕಾರ್ಮಿಕರು ಹಾಗೂ ಪೊಲೀಸರಿಗೆ ಈಗಾಗಲೇ ನೆರವು ನೀಡುತ್ತಿದ್ದಾರೆ’ ಎಂದು ಹೇಳಿದರು.

‘ವಿಶ್ವಹಿಂದೂ ಪರಿಷತ್ ವೀರಮದಕರಿ ಸೇವಾ ಟ್ರಸ್ಟ್‍ಗೆ ನೆರವು ನೀಡುವವರು ಆಹಾರ, ಧಾನ್ಯ ರೂಪದಲ್ಲಿ ಸಹಾಯ ಮಾಡಬಹುದು. ನಗದು ರೂಪದ ನೆರವನ್ನು ಸ್ವೀಕರಿಸುವುದಿಲ್ಲ. ಆಸಕ್ತರು ದೂರವಾಣಿ ಸಂಖ್ಯೆ 9844904137 ಹಾಗೂ 9008476229 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ವಿಎಚ್‍ಪಿ ಮುಖಂಡ ಶ್ರೀನಿವಾಸ್, ಬಜರಂಗದಳ ವಿಭಾಗ ಸಂಚಾಲಕ ಪ್ರಭಂಜನ್, ವಿಠಲ್, ರೆಡ್ಡಿ ಜನಸಂಘದ ಪರಶುರಾಮ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.