ADVERTISEMENT

ಸದೃಢ ರಾಷ್ಟ್ರನಿರ್ಮಾಣಕ್ಕೆ ಕಂಕಣಬದ್ಧರಾಗಿ: ಎಂ. ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 16:10 IST
Last Updated 29 ನವೆಂಬರ್ 2023, 16:10 IST
ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರ ನಡೆದ ಪಠ್ಯೇತರ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಶಾಸಕ ಎಂ. ಚಂದ್ರಪ್ಪ ಮಾತನಾಡಿದರು
ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರ ನಡೆದ ಪಠ್ಯೇತರ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಶಾಸಕ ಎಂ. ಚಂದ್ರಪ್ಪ ಮಾತನಾಡಿದರು   

ಭರಮಸಾಗರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ, ಸಂಸ್ಕಾರ ಪಡೆದುಕೊಳ್ಳಬೇಕು. ದೇಶಾಭಿಮಾನವನ್ನು ಉಸಿರಾಗಿಸಿಕೊಳ್ಳಬೇಕು. ಯುವಶಕ್ತಿಯೇ ಭವ್ಯ ಭಾರತದ ಭವಿಷ್ಯ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರ ನಡೆದ ಪಠ್ಯೇತರ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಶಕ್ತಿಶಾಲಿ ದೇಶವಾಗಲೂ ಪ್ರಧಾನಿ ಮೋದಿ ಒಬ್ಬರಿಂದಲೇ ಅಗುವುದಿಲ್ಲ. ಪ್ರತಿಯೊಬ್ಬ ಪ್ರಜೆಯೂ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇಸ್ರೇಲ್‌ನಲ್ಲಿ ಪ್ರತಿಯೊಬ್ಬರು ಶಿಕ್ಷಣ ಮುಗಿಸಿದ ನಂತರ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಕಾರ್ಯ ನಿಮಿತ್ತ ಬೇರೆ ಬೇರೆ ದೇಶಗಳಲ್ಲಿದ್ದರೂ ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ದೇಶ ಸಂರಕ್ಷಣೆ ಕಾರ್ಯಕ್ಕೆ ಬದ್ಧರಾಗುತ್ತಾರೆ ಎಂದರು.

ADVERTISEMENT

ಕಾಲೇಜುಗಳಲ್ಲಿ ನಡೆಯುವ ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಬದಲಾದ ಆಧುನಿಕ ಜಗತ್ತಿನಲ್ಲಿ ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳಿವೆ ಎಂದು ಹೇಳಿದರು.

ಮಕ್ಕಳ ಭವಿಷ್ಯ ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಹೊಳಲ್ಕೆರೆ ಪಟ್ಟಣದಲ್ಲಿ ₹ 30 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ₹ 89 ಕೋಟಿ ವೆಚ್ಚದ ಯೋಜನೆಯಡಿ ವಾಣಿವಿಲಾಸ ಸಾಗರದಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ.ಎಸ್.ಶಶಿಕಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಕಲ್ಲೇಶ್, ನಿರ್ಮಲಾ, ಕರಿಯಮ್ಮ, ನಾಡಿಗರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.