ADVERTISEMENT

ಹತ್ತು ಕೆರೆಗೆ ಭದ್ರಾ ಮೇಲ್ದಂಡೆ ನೀರು: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿಕೆ,

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 11:54 IST
Last Updated 14 ಜನವರಿ 2022, 11:54 IST
ಜಿ.ಎಚ್‌.ತಿಪ್ಪಾರೆಡ್ಡಿ
ಜಿ.ಎಚ್‌.ತಿಪ್ಪಾರೆಡ್ಡಿ   

ಚಿತ್ರದುರ್ಗ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹತ್ತು ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಪಡೆ ಮಾಡಿ ಸರ್ಕಾರ ಅನುಮೋದನೆ ನೀಡಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತ್ವರಿತಗತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹರ್ಷ ವ್ಯಕ್ತಪಡಿಸಿದರು.

‘ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರು ಒದಗಿಸುವ ಉದ್ದೇಶದಿಂದ ರೂಪಿಸಿದ ಭದ್ರಾ ಮೇಲ್ದಂಡೆ ಯೋಜನೆ ಬಯಲುಸೀಮೆ ರೈತರಲ್ಲಿ ಭರವಸೆ ಮೂಡಿಸಿದೆ. ನಾಲ್ಕು ಜಿಲ್ಲೆಯ 367 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಇದರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹತ್ತು ಕೆರೆಗಳು ಕೈಬಿಟ್ಟುಹೋಗಿದ್ದವು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮುರುಘಾ ಮಠದ ಎರಡು ಕೆರೆ, ಸಿದ್ದಾಪುರ, ಮಾನಂಗಿ, ಕಾಟೀಹಳ್ಳಿ, ಹುಲ್ಲೂರು, ಅನ್ನೇಹಾಳು, ನಂದಿಪುರ, ಕುರುಮರಡಿಕೆರೆ ಮತ್ತು ಚಿಕ್ಕಸಿದ್ದವ್ವನಹಳ್ಳಿ ಕೆರೆಗಳನ್ನು ಯೋಜನೆಯಿಂದ ಹೊರಗೆ ಇಡಲಾಗಿತ್ತು. ನಾಲೆಯ ಕೆಳಭಾಗದ ಜೆ.ಎನ್‌.ಕೋಟೆ, ಗೋನೂರು ಸೇರಿ ಇತರ ಗ್ರಾಮಗಳಿಗೆ ಮಾತ್ರ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಯೋಜನೆಯಿಂದ ಕೈಬಿಟ್ಟು ಹೋಗಿರುವ ಕೆರೆಗಳಿಗೂ ನೀರಿನ ಸಂಪರ್ಕ ಕಲ್ಪಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ತುಂಗಭದ್ರಾ ನದಿಯಿಂದ ರೂಪಿಸಿದ ಭರಮಸಾಗರ ಏತ ನೀರಾವರಿ ಯೋಜನೆಯ ವ್ಯಾಪ್ತಿಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕೆಲ ಕೆರೆಗಳು ಒಳಪಟ್ಟಿವೆ. ಭದ್ರಾ ಮೇಲ್ದಂಡೆಯಲ್ಲಿ ಹತ್ತು ಕರೆಗೆ ಅವಕಾಶ ಕಲ್ಪಿಸಿದ್ದರಿಂದ ಕೃಷಿ ಮತ್ತು ಕುಡಿಯುವ ನೀರಿಗೆ ತೊಂದರೆ ಉಂಟಾಗುವುದಿಲ್ಲ. ರೈತರ ಹೋರಾಟದಿಂದ ಸಾಕಾರಗೊಂಡ ಭದ್ರಾ ಮೇಲ್ದಂಡೆ ಯೋಜನೆ ಜಿಲ್ಲೆಯ ಚಿತ್ರಣವನ್ನು ಬದಲಿಸಲಿದೆ’ ಎಂದು ಸಂತಸ ಹಂಚಿಕೊಂಡರು.

ಕಾತ್ರಾಳು ಕೆರೆಯಲ್ಲಿ ನೀರು ಸಂಗ್ರಹ

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹತ್ತು ಕೆರೆಗಳಿಗೆ ಭದ್ರಾ ಮೇಲ್ದಂಡೆಯ ಜಗಳೂರು ಶಾಖಾ ಕಾಲುವೆಯಿಂದ ನೀರು ಹರಿಸಲಾಗುವುದು. ಇದಕ್ಕೆ ಸಂಪೂರ್ಣ ಯೋಜನೆ ಸಿದ್ಧವಾಗಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀಧರ್‌ ಮಾಹಿತಿ ನೀಡಿದರು.

‘ಕಾತ್ರಾಳು ಕೆರೆ ಸುಮಾರು 400 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿಗೆ ನೀರು ಪಂಪ್‌ ಮಾಡಿ ಸಂಗ್ರಹಿಸಲಾಗುತ್ತದೆ. ಜಾಕ್‌ವಾಲ್‌ ನಿರ್ಮಿಸಿ ಅಲ್ಲಿಂದ 8 ಕಿ.ಮೀ ದೂರದ ಇಚಲನಾಗೇನಹಳ್ಳಿಯ ಬೆಟ್ಟದವರೆಗೆ ಕೊಂಡೊಯ್ಯಲಾಗುತ್ತದೆ. ಎತ್ತರಪ್ರದೇಶದಿಂದ ಗುರುತ್ವಾಕರ್ಷಕ ಬಲದಿಂದ ನೀರು ಹರಿಸಲಾಗುತ್ತದೆ. ಕೆರೆಯ ಸಾಮರ್ಥ್ಯದ ಶೇ 50ರಷ್ಟು ನೀರು ತುಂಬಿಸಲಾಗುತ್ತದೆ’ ಎಂದು ವಿವರಿಸಿದರು.

173 ಹಳ್ಳಿಗೆ ವಿ.ವಿ.ಸಾಗರ ನೀರು

‘ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ವಾಣಿವಿಲಾಸ ಜಲಾಶಯದಿಂದ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಜಲಾಶಯದ 0.36 ಟಿಎಂಸಿ ಅಡಿ ನೀರನ್ನು ಗ್ರಾಮಗಳ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿಗಳೇ ಆಶ್ರಯ. ಮಳೆ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿದರೆ ತತ್ವಾರ ಉಂಟಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದರೂ ಫ್ಲೋರೈಡ್‌ ಅಂಶದ ತೊಂದರೆ ತಪ್ಪಿಲ್ಲ. ಜಲಜೀವನ್‌ ಯೋಜನೆಯಡಿ ಮನೆ–ಮನೆಗೆ ನೀರು ತಲುಪಿಸುವ ಯೋಜನೆ ಸಿದ್ಧವಾಗಿದೆ’ ಎಂದು ವಿವರಿಸಿದರು.

ಗ್ರಾಮಗಳಿಗೆ ಶುದ್ಧ ನೀರು

ವಿ.ವಿ.ಸಾಗರ ಜಲಾಶಯದ ನೀರನ್ನು ಲಕ್ಕೆಹಳ್ಳಿಗೆ ತರಲಾಗುತ್ತದೆ. ಅಲ್ಲಿ ಜಾಕವೆಲ್‌ ನಿರ್ಮಿಸಲು ಯೋಜಿಸಲಾಗಿದೆ. ಅಲ್ಲಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 173 ಕೆರೆಗಳಿಗೆ ನೀರು ಹಂಚಿಕೆ ಮಾಡಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ ಪುರುಷೋತ್ತಮ ತಿಳಿಸಿದರು.

‘ಲಕ್ಕೆಹಳ್ಳಿಯ ಬಳಿ ಆರು ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗುವುದು. ಅಲ್ಲಿ ನೀರು ಶುದ್ಧೀಕರಿಸಲಾಗುತ್ತದೆ. ಅಲ್ಲಿಂದ ಯೋಜನೆ ವ್ಯಾಪ್ತಿಯ ಎಲ್ಲ ಹಳ್ಳಿಗೂ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುವುದು’ ಎಂದರು.

***

ಹೆಚ್ಚುವರಿ ಕೆರೆ ಸೇರ್ಪಡೆ ಮಾಡಿದರೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುವುದಿಲ್ಲ ಎಂಬ ಆತಂಕವಿದೆ. ತಾಲ್ಲೂಕಿಗೆ ಮೀಸಲಿಟ್ಟ ನೀರನ್ನು ಹೆಚ್ಚುವರಿ ಕೆರೆಗೆ ಹಂಚಿಕೆ ಮಾಡಲಾಗುತ್ತದೆ. ಹೆಚ್ಚುವರಿ ನೀರು ನಾಲೆಯಿಂದ ಬಳಕೆ ಆಗುವುದಿಲ್ಲ.

-ಜಿ.ಎಚ್‌.ತಿಪ್ಪಾರೆಡ್ಡಿ,ಶಾಸಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.