ADVERTISEMENT

ಅಂಜಬೇಡಿ, ಅಳುಕಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಶಾಸಕ ಶಿವಗಂಗಾ ಬಸವರಾಜ್‌

ಶ್ರದ್ಧಾಂಜಲಿ ಸಮಾರಂಭದಲ್ಲಿ ಶಾಸಕ ಶಿವಗಂಗಾ ಬಸವರಾಜ್‌ ಅಭಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 16:21 IST
Last Updated 22 ಸೆಪ್ಟೆಂಬರ್ 2024, 16:21 IST
ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಮಾತನಾಡಿದರು
ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಮಾತನಾಡಿದರು   

ಸಿರಿಗೆರೆ: ಮಠದ ವಿಚಾರವಾಗಿ ಎದ್ದಿರುವ ಯಾವುದೇ ವಿವಾದಕ್ಕೂ ಅಂಜಬೇಡಿ, ಅಳುಕಬೇಡಿ. ಎಂತಹ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ’ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಅವರು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಅಭಯ ನೀಡಿದರು. 

ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದ 3ನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಇಡೀ ಚನ್ನಗಿರಿ ಕ್ಷೇತ್ರದ ಭಕ್ತರು ತಮ್ಮ ಜೊತೆಗಿದ್ದೇವೆ. ಅದೆಂತಹ ಪರಿಸ್ಥಿತಿಯೇ ಬರಲಿ, ನಮ್ಮ ಬೆಂಬಲ ತಮಗೆ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಸಮುದಾಯದ ಸಾಮಾನ್ಯ ಭಕ್ತರಿಂದ ನಮ್ಮ ಮಠ ಬೆಳೆದಿದೆಯೇ ಹೊರತು, ಶ್ರೀಮಂತರು ಮತ್ತು ರಾಜಕಾರಣಿಗಳ ಬೆಂಬಲದಿಂದಲ್ಲ. ಸಾಮಾನ್ಯ ಭಕ್ತರೆಲ್ಲರೂ ತಮ್ಮೊಂದಿಗೆ ಇದ್ದೇ ಇದ್ದಾರೆ. ಮಠದ ಅಭಿವೃದ್ಧಿಯಲ್ಲಿ 40 ವರ್ಷಗಳಷ್ಟು ಕಾಲ ತಾವು ಮಾಡಿರುವ ಸಾಧನೆ ಎಲ್ಲರಿಗೂ ತಿಳಿದಿದೆ. ಆ ಕೆಲಸಗಳು ಇನ್ನೂ ಮುಂದುವರೆಯಲಿ ಎಂದರು.

ADVERTISEMENT

‘ತರಳಬಾಳು ಶ್ರೀ ಕೃಪೆಯಿಂದ ತುಂಗಭದ್ರೆಯೇ ಓಡೋಡಿ ಬಂದು ಜಗಳೂರು ತಾಲ್ಲೂಕಿನ 33 ಕೆರೆಗಳನ್ನು ತುಂಬಿಸಿದ್ದಾಳೆ. ತರಳಬಾಳು ಮಠಕ್ಕೆ ಎಲ್ಲ ಸಮುದಾಯಗಳನ್ನು ಅಪ್ಪಿಕೊಳ್ಳುವ ಹೃದಯ ವೈಶಾಲ್ಯತೆ ಇದೆ’ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ಸೂರ್ಯ ಚಂದ್ರರು ಇರುವ ತನಕ ಉಳಿಯವಂತಹ ಕೆಲಸವನ್ನು ತರಳಬಾಳು ಶ್ರೀ ಸಾಧಿಸಿದ್ದಾರೆ. ಅವರು ಕೆರೆಗಳನ್ನು ತುಂಬಿಸಿ ರೈತರಿಗೆ ನೆರವಾಗಿರುವುದು ಮಹತ್ತರವಾದುದು. ಸಾರ್ವಜನಿಕರ ಬದುಕು ಹಸನು ಮಾಡಲು ಅವರು ಸದಾ ಮುಂದಿದ್ದಾರೆ. ಅವರು ಯಾವಾಗಲೂ ಸಮಾಜಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್‌, ರಂಗಕರ್ಮಿ ಎನ್.‌ಎಸ್‌. ಸೇತುರಾಂ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಮಾತನಾಡಿದರು. 

ಶಿವಕುಮಾರ ಶ್ರೀಗಳ ದೂರದೃಷ್ಟಿಯ ಕುರಿತು ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ವೈ. ವೃಷಭೇಂದ್ರಪ್ಪ ಉಪನ್ಯಾಸ ನೀಡಿದರು.

ಬಿ.ಎನ್‌. ಗೋವಿಂದರಾವ್‌ ಅವರ ಕೃತಿಯನ್ನು ಎನ್.‌ಎಸ್.‌ ಸೇತುರಾಂ ಹಾಗೂ ಡಾ. ಎಂ. ಈಶ್ವರಶರ್ಮಾ ಅವರ ಕೃತಿಯನ್ನು ಗೊಲ್ಲಹಳ್ಳಿ ಶಿವಪ್ರಸಾದ್‌ ಲೋಕಾರ್ಪಣೆ ಮಾಡಿದರು. ತರಳಬಾಳು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಸಿಂದಗಿ ಹಿಂದೂಸ್ತಾನಿ ಗಾಯಕ ಯಶವಂತ ಬಡಿಗೇರ್‌ ವಚನ ಗೀತೆಗಳನ್ನು ಹಾಡಿದದರು. ಸ್ಪರ್ಧೆಗಳಲ್ಲಿ ವಿಜೇತರಾದ ತರಳಬಾಳು ಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿರಿಗೆರೆ ಶಾಲಾ ವಿದ್ಯಾರ್ಥಿಗಳು ಮಲ್ಲಿಹಗ್ಗ ಮತ್ತು ಯಕ್ಷಗಾನ ಪ್ರದರ್ಶಿಸಿದರು.

ಪ್ರಾದೇಶಿಕ ಅಧಿಕಾರಿ ಕೆ.ಇ. ಬಸವರಾಜಪ್ಪ ಸ್ವಾಗತಿಸಿದರು. ಎಚ್.‌ ಎನ್.‌ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಶಿವಕುಮಾರ ಶ್ರೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಶಿವಮೂರ್ತಿ ಶ್ರೀ ಚಾಲನೆ ನೀಡಿದರು
ಸಿರಿಗೆರೆಯ ತರಳಬಾಳು ಕಲಾಸಂಘದ ಬಾಲಕಿಯರು ಮಲ್ಲಿಹಗ್ಗ ಪ್ರದರ್ಶನ ನೀಡಿ ರೋಮಾಂಚನಗೊಳಿಸಿದರು
ಸಿರಿಗೆರೆ ಶಾಲಾ ಬಾಲಕಿಯರು ಪ್ರಸ್ತುತ ಪಡಿಸಿದ ನೃತ್ಯರೂಪಕ ನೋಡುಗರ ಕಣ್ಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.