ADVERTISEMENT

ಶಾಸಕರ ಸಲಹೆ: ಮೂಢನಂಬಿಕೆ ಕೈಬಿಟ್ಟ ಯಲ್ಲದಕೆರೆ ಗ್ರಾಮಸ್ಥರು

ಮನೆಯಾಚೆ ಗುಡಿಸಲಲ್ಲಿ ಇದ್ದವರು ಮನೆಯೊಳಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 4:54 IST
Last Updated 9 ಫೆಬ್ರುವರಿ 2023, 4:54 IST

ಹಿರಿಯೂರು: ‘ಋತುಮತಿ, ಋತುಸ್ರಾವದಂತಹ ಕ್ರಿಯೆಗಳು ಮಹಿಳೆಯರಲ್ಲಿ ಸಹಜ. ಅಂತಹ ಮಹಿಳೆಯನ್ನು ಮನೆಯಿಂದ ಹರಕು ಗುಡಿಸಲಲ್ಲಿ, ಅಪಾಯಕಾರಿ ಜಾಗದಲ್ಲಿ ಬಿಡುವುದು ಅಮಾನವೀಯ. ಇಂತಹ ಆಚರಣೆಗಳು ಮುಂದುವರಿಯಬಾರದು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಾಕೀತು ಮಾಡಿದರು.

ತಾಲ್ಲೂಕಿನ ಯಲ್ಲದಕೆರೆಯಲ್ಲಿ ಮಂಗಳವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಹೋಗಿದ್ದ ಶಾಸಕರಿಗೆ, ಶಾಲೆ ಸಮೀಪದ ಬಡಗೊಲ್ಲರಹಟ್ಟಿ ಗ್ರಾಮಸ್ಥರು ಹಟ್ಟಿಯಲ್ಲಿನ ಮೂಢ
ನಂಬಿಕೆ ತಡೆಯುವಂತೆ ಮನವಿ ಮಾಡಿದ್ದರಿಂದ ಭೇಟಿ ನೀಡಿದ್ದರು.

ಹೆಣ್ಣುಮಕ್ಕಳ ಓದು ಸ್ಥಗಿತ: ಹಟ್ಟಿಯಲ್ಲಿರುವ ಹೆಣ್ಣುಮಕ್ಕಳು ಮುಟ್ಟಿನ ಕಾರಣಕ್ಕೆ ಹತ್ತನೇ ತರಗತಿಗೆ ಓದು ನಿಲ್ಲಿಸಿರುವುದನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ, ‘ಇದು ಕೇವಲ ಮೂಢನಂಬಿಕೆಯಲ್ಲ, ಹೆಣ್ಣಿನ ಮೇಲಿನ ಕ್ರೌರ್ಯ. ಸರ್ಕಾರ ಪ್ರೌಢಶಾಲೆಯಲ್ಲಿ ಓದುವ ಹೆಣ್ಣುಮಕ್ಕಳಿಗೆ ನ್ಯಾಪ್ ಕಿನ್ ಒದಗಿಸುತ್ತಿದೆ. ಮುಟ್ಟು ಎಂದಾಕ್ಷಣ ಹೆಣ್ಣನ್ನು ದೂರ ಇಡುವುದು ಎಂದರ್ಥವಲ್ಲ. ಬದಲಾದ ಕಾಲಕ್ಕೆ ತಕ್ಕಂತೆ ನಮ್ಮ ಆಚರಣೆಗಳೂ ಬದಲಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೆಲವರು ಮಾತ್ರ ಇಂತಹ ಆಚರಣೆ ಮಾಡುತ್ತಿದ್ದು, ದೇವರ ಹೆಸರು ಹೇಳುತ್ತಾರೆ’ ಎಂದು ಕೆಲ ಗ್ರಾಮಸ್ಥರು ಹೇಳಿದಾಗ, ‘ಯಾವ ದೇವರೂ ಇಂತಹ ಕ್ರೂರ ಆಚರಣೆ ಮಾಡುವಂತೆ ಹೇಳು‌ವುದಿಲ್ಲ. ದೈವದ ಮೇಲೆ ನಂಬಿಕೆ ಇರಲಿ, ಮೂಢನಂಬಿಕೆಯಲ್ಲ’ ಎಂದು ಕಿವಿಮಾತು ಹೇಳಿದರು.

ಶಾಸಕರ ಮಾತಿಗೆ ಗ್ರಾಮದ ಹಿರಿಯರು ಒಪ್ಪಿದರು. ಶಾಸಕರೇ ಊರ ಹೊರಗಿದ್ದ ಹೆಣ್ಣು ಮಕ್ಕಳನ್ನು ಕರೆದು ಮನೆಯ ಒಳಗಡೆ ಕರೆ ತರುವ ಮೂಲಕ ಶತಮಾನಗಳ ಮೂಢನಂಬಿಕೆಗೆ ತಿಲಾಂಜಲಿ ಹಾಕಿದರು.

ಐದು ವರ್ಷಗಳ ಹಿಂದೆ ಇಲ್ಲಿ ಚಿದಾನಂದ್ ಮಸ್ಕಲ್, ವಕೀಲ ಶಿವು ಯಾದವ್, ನವೀನ್ ಕುಮಾರ್, ಮಂಜು ನೇತೃತ್ವದ ತಂಡ, ‘ಕಾಡುಗೊಲ್ಲ ಯುವಕರ ನಡೆ ಗೊಲ್ಲರಹಟ್ಟಿಯ ಕಡೆ’ ಎಂಬ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು, ಜಾಗೃತಿ ಮೂಡಿಸಿತ್ತು. ಆಗ ಕೆಲವರು ಈ ಆಚರಣೆ ಕೈಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.