ADVERTISEMENT

ಕೋವಿಡ್‌ ಆಸ್ಪತ್ರೆಗೆ ರಘು ಆಚಾರ್ ಭೇಟಿ

ಪಿಪಿಇ ಕಿಟ್‌ ಧರಿಸಿ ಸೋಂಕಿತರ ಸಮಸ್ಯೆ ಆಲಿಸಿದ ವಿಧಾನಪರಿಷತ್‌ ಸದಸ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 13:11 IST
Last Updated 30 ಜುಲೈ 2020, 13:11 IST
ರಘು ಆಚಾರ್
ರಘು ಆಚಾರ್   

ಚಿತ್ರದುರ್ಗ: ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ ಕಿಟ್‌) ಧರಿಸಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದರು.

ಸುಮಾರು 25 ನಿಮಿಷ ಆಸ್ಪತ್ರೆಯಲ್ಲಿದ್ದ ಅವರು ಎಲ್ಲ ವಾರ್ಡ್‌ಗೆ ತೆರಳಿ ಸೌಲಭ್ಯ ಪರಿಶೀಲಿಸಿದರು. ಚಿಕಿತ್ಸೆ, ಊಟ, ಔಷಧ ವಿತರಣೆಗೆ ಸಂಬಂದಿಸಿದಂತೆ ಸೋಂಕಿತರ ಅಭಿಪ್ರಾಯ ಪಡೆದರು. ರೋಗಿಗಳಿಗೆ ತಮ್ಮ ಮೊಬೈಲ್‌ ಸಂಖ್ಯೆ ನೀಡಿ ಅಹವಾಲು ಸಲ್ಲಿಸುವಂತೆ ತಿಳಿಸಿದರು.

‘ಊಟ ಹೇಗಿರುತ್ತೆ? ವೈದ್ಯರು ವಾರ್ಡ್‌ಗೆ ಭೇಟಿ ನೀಡುತ್ತಾರೆಯೇ’ ಎಂದು ರೋಗಿಗಳನ್ನು ಪ್ರಶ್ನಿಸಿ ಅಭಿಪ್ರಾಯ ಪಡೆದರು. ‘ಎಲ್ಲರೂ ವಯಸ್ಸಾದವರೇ ಇದ್ದೇವೆ. ರಕ್ತದೊತ್ತಡ, ಮಧುಮೇಹ ಇರುವವರನ್ನು ಒಂದೇ ವಾರ್ಡ್‌ಗೆ ಹಾಕಿದ್ದಾರೆ’ ಎಂದು ರೋಗಿಗಳು ಮಾಹಿತಿ ನೀಡಿದರು. ‘ನೀವು ಯಾರೂ ಗೊತ್ತಾಗಲಿಲ್ಲ’ ಎಂಬ ರೋಗಿಯ ಪ್ರಶ್ನೆಗೆ ರಘು ಆಚಾರ್‌ ಗುರುತು ಹೇಳಬೇಕಾಯಿತು.

ADVERTISEMENT

ಮಹಿಳೆಯರ ವಾರ್ಡ್‌ನ ಶೌಚಾಲಯದ ಬಳಿ ರಾಶಿ ಬಿದ್ದ ತ್ಯಾಜ್ಯವನ್ನು ಕಂಡು ಅಸಮಾಧಾನ ಹೊರಹಾಕಿದರು. ‘ಎಷ್ಟು ದಿನಕ್ಕೊಮ್ಮೆ ಶುಚಿಗೊಳಿಸುತ್ತೀರಿ’ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಐಸಿಯುಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಎಲ್ಲ ವಾರ್ಡ್‌ಗೆ ಭೇಟಿ ನೀಡಿದ್ದೆ. ಅಲ್ಲಲ್ಲಿ ಶುಚಿತ್ವದ ಕೊರತೆ ಕಾಣುತ್ತಿದೆ. ವೈದ್ಯರು ನಿತ್ಯ ವಾರ್ಡ್‌ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಪರಿಶೀಲಿಸುತ್ತಿಲ್ಲ. ರಕ್ತದೊತ್ತಡ, ಮಧುಮೇಹ ಪರಿಶೀಲಿಸುತ್ತಿಲ್ಲ. ಈ ಬಗ್ಗೆ ಹಲವರು ದೂರು ಸಲ್ಲಿಸಿದ್ದಾರೆ’ ಎಂದು ರಘು ಆಚಾರ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಸೊಂಟ ಮುರಿದ ಮಹಿಳೆ ಮಾತ್ರ ನೆಲದ ಮೇಲೆ ಮಲಗಿದ್ದಾರೆ. ಉಳಿದ ಎಲ್ಲರಿಗೂ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್‌ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆದಿದ್ದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದರು.

‘ಜಿಲ್ಲಾ ಆಸ್ಪತ್ರೆ ಕೋವಿಡ್‌ಗೆ ಮೀಸಲು’

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ರೋಗಿಗಳಿಗೆ ಮೀಸಲಿಡುವುದು ಒಳಿತು. ಉಳಿದ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಘು ಆಚಾರ್‌ ಒತ್ತಾಯಿಸಿದರು.

‘ಚಿತ್ರದುರ್ಗ ಜನರು ಫಿಜ್ಜಾ, ಬರ್ಗರ್‌ ತಿಂದಿಲ್ಲ. ಹೀಗಾಗಿ, ರೋಗನಿರೋಧಕ ಶಕ್ತಿ ಹೆಚ್ಚಾಗಿದೆ. ಆದರೂ, ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವೈದ್ಯರು ಚಿಕಿತ್ಸೆ ನೀಡಬಹುದೇ ಹೊರತು ಸೋಂಕು ನಿವಾರಿಸಲು ಸಾಧ್ಯವಿಲ್ಲ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಲಾಕ್‌ಡೌನ್‌ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದರು.

ಮೂರು ಸರ್ಕಾರಿ ಶಾಲೆ ದತ್ತು

ಚಿತ್ರದುರ್ಗ ತಾಲ್ಲೂಕಿನ ಮೂರು ಸರ್ಕಾರಿ ಶಾಲೆಗಳನ್ನು ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ದತ್ತು ಪಡೆದರು. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದರು.

‘ಗೊಡಬನಾಳ್‌, ಡಿ.ಎಸ್‌.ಹಳ್ಳಿ ಹಾಗೂ ಚಿತ್ರದುರ್ಗದ ಬುದ್ಧ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದ್ದೇನೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ. ಹೆಚ್ಚು ಮಕ್ಕಳು ಇರುವ ಶಾಲೆಗಳನ್ನು ನೋಡಿ ಆಯ್ಕೆ ಮಾಡಿಕೊಂಡಿದ್ದೇನೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.