ADVERTISEMENT

ಮೊಳಕಾಲ್ಮುರು: ಶೇಂಗಾ, ತೊಗರಿಗೆ ಬೆಂಕಿರೋಗದ ಕಾಟ

ಮಳೆಕೊರತೆಯಿಂದ ಹರಡಿದ ರೋಗ, ವರ್ಷದ ಬೆಳೆ ಕಳೆದುಕೊಳ್ಳುವ ನಷ್ಟಭೀತಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 7 ಅಕ್ಟೋಬರ್ 2025, 6:15 IST
Last Updated 7 ಅಕ್ಟೋಬರ್ 2025, 6:15 IST
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಬಳಿ ಒಣಗುತ್ತಿರುವ ಶೇಂಗಾ ಬೆಳೆ
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಬಳಿ ಒಣಗುತ್ತಿರುವ ಶೇಂಗಾ ಬೆಳೆ   

ಮೊಳಕಾಲ್ಮುರು: ತಾಲ್ಲೂಕಿನಲ್ಲಿರುವ ಮಳೆಯಾಧಾರಿತ (ಖುಷ್ಕಿ) ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ, ತೊಗರಿ ಬೆಳೆಗೆ ಮಳೆಯ ಕೊರತೆಯಿಂದಾಗಿ ಬೆಂಕಿರೋಗ ಕಾಣಿಸಿಕೊಂಡಿದೆ. ರೋಗಕ್ಕೆ ಸಿಲುಕಿರುವ ಗಿಡಗಳು ಒಣಗುತ್ತಿದ್ದು ಬೆಳೆ ಕೈತಪ್ಪುವ ಆತಂಕ ಶುರುವಾಗಿದೆ.

‘ವಾರ್ಷಿಕವಾಗಿ ಒಂದು ಬೆಳೆ ಮಾತ್ರ ಬೆಳೆಯುತ್ತೇವೆ‌. ಈ ವರ್ಷ ಮಳೆ ಕೈಕೊಟ್ಟಿರುವ ಪರಿಣಾಮ ಬೆಳೆ ಕೈಗೆಟುಕುವುದು ಅನುಮಾನ. ಇಡೀ ವರ್ಷದ ಬೆಳೆ ಹಾಳಾಗುವ ಸಾಧ್ಯತೆ ಇದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ 25,000ದಿಂದ 26,000 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತಿತ್ತು. 4–5 ವರ್ಷಗಳಿಂದ ನಷ್ಟಕ್ಕೀಡಾಗಿರುವ ಕಾರಣ ಅನೇಕರು ಶೇಂಗಾ ಬಿತ್ತನೆಯಿಂದ ದೂರ ಉಳಿದಿದ್ದಾರೆ. ಈ ವರ್ಷ 18,000 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ, ಜೂನ್‌ ಅಂತ್ಯಕ್ಕೆ ಬಿತ್ತನೆ ಕಾರ್ಯ ಮುಗಿದಿತ್ತು.

ADVERTISEMENT

‘ಒಂದು ತಿಂಗಳ ಹಿಂದೆ ಶೇಂಗಾ ನಡುವಿನ ಕಳೆ ತೆಗೆದು, ಎಡೆ ಕುಂಟೆ ಹೊಡೆದು ಹೊಲ ಸ್ವಚ್ಛ ಮಾಡಲಾಗಿತ್ತು. ನಂತರ ಒಂದು ಹದ ಮಳೆ ಅಗತ್ಯ ತುಂಬಾ ಇತ್ತು. ಆದರೆ, ಈವರೆಗೂ ಮಳೆ ಸುಳಿವಿಲ್ಲ. ಜತೆಗೆ ಬೆಂಕಿರೋಗ ಹೆಚ್ಚುತ್ತಿದೆ. ಕೀಟನಾಶಕ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಬಿರುಸು ಮಳೆ ಬಂದಿದ್ದರೆ ರೋಗ ಹತೋಟಿಗೆ ಬರುತ್ತಿತ್ತು. ರೋಗದಿಂದಾಗಿ ಗಿಡ ಒಣಗುತ್ತಿವೆ’ ಎಂದು ರೈತ ಕೋನಸಾಗರದ ನೀಲಪ್ಪ ಹೇಳಿದರು.

‘ತಾಲ್ಲೂಕಿನ ದೇವಸಮುದ್ರ ಹೋಬಳಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಕಸಬಾದಲ್ಲಿ ಹೆಚ್ಚು ಶೇಂಗಾ ಬಿತ್ತನೆ ಮಾಡಲಾಗಿದೆ. ಬಿ.ಜಿ.ಕೆರೆ, ಮಾರಮ್ಮನಹಳ್ಳಿ, ನೇರ್ಲಹಳ್ಳಿ, ಕೋನಸಾಗರ, ಊಡೇವು, ಮುತ್ತಿಗಾರಹಳ್ಳಿ, ಸೂರಮ್ಮನಹಳ್ಳಿ, ನೇತ್ರನಹಳ್ಳಿ, ತುಮಕೂರ್ಲಹಳ್ಳಿ, ರಾಯಾಪುರ ಸುತ್ತಮುತ್ತ ಜಾನುವಾರು, ಕುರಿ, ಮೇಕೆಗಳ ಸಂಖ್ಯೆ ಹೆಚ್ಚಿದೆ. ಶೇಂಗಾ ಇಳುವರಿ ಜತೆಗೆ ಮೇವಿನ ವ್ಯವಸ್ಥೆಗೂ ಶೇಂಗಾ ನೆಚ್ಚಿಕೊಳ್ಳಲಾಗಿದೆ. ಇಲ್ಲಿನ ರೈತರಿಗೆ ಬೆಳೆನಷ್ಟದ ಜತೆ ಮೇವಿನ ಸಂಕಷ್ಟದ ಚಿಂತಯೂ ಎದುರಾಗಿದೆ’ ಎಂದು ಕೃಷಿಕ ಸೂರಮ್ಮನಹಳ್ಳಿಯ ತಿಪ್ಪಯ್ಯ ಹೇಳಿದರು.

ಈಗ ಮಳೆ ಬಂದರೂ ಬೆಳೆ ಸುಧಾರಿಸುವ ಸಾಧ್ಯತೆ ತೀರಾ ಕಡಿಮೆ. ಒಣಗಿರುವ ಗಿಡಗಳು ಕೊಳೆತು ಹೋಗುವ ಜತೆಗೆ ಬುಡುಸು ರೋಗ ಬಂದಲ್ಲಿ ಬುಡ ಮತ್ತು ಗಿಡಗಳು ಬೇರ್ಪಡಲಿವೆ. ಇದರಿಂದ ಕಟಾವಿಗೆ ಮಡಿಕೆ ಬಳಕೆ ಅನಿವಾರ್ಯವಾಗಲಿದೆ. ಇದು ಇನ್ನಷ್ಟು ನಿರ್ವಹಣೆ ವೆಚ್ಚವನ್ನು ಹೆಚ್ಚು ಮಾಡಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿತ್ತನೆಬೀಜ, ಗೊಬ್ಬರ, ಬಿತ್ತನೆಗೆಯ ಕೂಲಿ, ಕಳೆ ತೆಗೆಸುವುದು, ಎಡೆಕುಂಟೆ ಸೇರಿ ಪ್ರತಿ ಎಕರೆಗೆ ₹ 25,000ದಿಂದ 30,000 ವೆಚ್ಚ ಬಂದಿದೆ. ರೋಗ, ಮಳೆ ಕೊರತೆಯು ಪೂರ್ಣ ನಷ್ಟ ಮಾಡುತ್ತಿದೆ. ಮುಂಚಿತವಾಗಿ ಬಿತ್ತನೆ ಮಾಡಿರುವ ಶೇಂಗಾವನ್ನು ಮೇವಿನ ಉದ್ದೇಶಕ್ಕಾಗಿ ಕಟಾವು ಮಾಡಲಾಗುತ್ತಿದೆ. ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದು ರೈತರ ಅಳಲು.

‘ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಫಸಲ್‌ ಬಿಮಾ ವಿಮೆ ಯೋಜನೆ ಅಡಿ ಶೇ 25ರಷ್ಟು ಮಧ್ಯಂತರ ಪರಿಹಾರಕ್ಕೆ ಅವಕಾಶವಿದೆ. ಜಿಲ್ಲಾಧಿಕಾರಿ, ಶಾಸಕರು ಈ ಕುರಿತು ಗಮನಹರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಮನವಿ ಮಾಡಬೇಕು’ ಎಂದು ರೈತಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಕೋರಿದರು.

ಸರ್ಕಾರ ಬೆಳೆನಷ್ಟದ ಬಗ್ಗೆ ಇನ್ನೂ ವರದಿ ಕೇಳಿಲ್ಲ. ಆದರೆ ರೈತಸಂಘಗಳು ಪ್ರತಿಭಟನೆ ಮಾಡುತ್ತಿರುವ ಕಾರಣ ಜಿಲ್ಲಾಡಳಿತಕ್ಕೆ ವಾಸ್ತವ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಟಿ. ಜಗದೀಶ್‌ ತಹಶೀಲ್ದಾರ್‌ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.