ಮೊಳಕಾಲ್ಮುರು: ‘ಶೋಷಿತ ಸಮುದಾಯಗಳು ಉತ್ತಮ ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನಾಂಗದ ಮುಖಂಡರು ಅಗತ್ಯ ಮಾರ್ಗದರ್ಶನ ನೀಡಬೇಕು’ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಹಾನಗಲ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಬುಧವಾರ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.
‘ಹಲವು ವರ್ಷಗಳಿಂದ ಜನಾಂಗದವರು ಭವನ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ಕಾರಣಾಂತರದಿಂದ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಈಗ ₹ 4 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 2 ಕೋಟಿ ಅನುದಾನ ಮಂಜೂರಾಗಿದೆ. ₹ 2 ಕೋಟಿ ಹೆಚ್ಚುವರಿಯಾಗಿ ನೀಡುವುದಾಗಿ ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ. ಆಧುನಿಕವಾಗಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಈಗ ಭವನಕ್ಕೆ ಗುರುತಿಸಿರುವ ಸ್ಥಳ ಮುಖ್ಯರಸ್ತೆಯಲ್ಲಿ ಇದ್ದು, ಹೆಚ್ಚು ಬೆಲೆಬಾಳುವ ಸ್ಥಳವಾಗಿದೆ. ಇದನ್ನು ಅಂಬೇಡ್ಕರ್ ಭವನಕ್ಕೆ ನೀಡಬಾರದು ಎಂಬ ಹುನ್ನಾರ ನಡೆಯಿತು. ಮಂಜೂರು ತಡೆಯುವ ಒತ್ತಡ ಮಾಡಲಾಗಿತ್ತು. ಈ ಸಮಸ್ಯೆಯನ್ನು ನಿಭಾಯಿಸಿ ಸ್ಥಳ ಮಂಜೂರು ಮಾಡಿಸಿ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಭವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಪ್ರಕಾಶ್, ದಸಂಸ ಜಿಲ್ಲಾ ಸಂಚಾಲಕ ಬಿ.ಟಿ. ನಾಗಭೂಷಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಗಲಹಳ್ಳಿ ಎಸ್. ಜಯಣ್ಣ, ಜಿ. ಶ್ರೀನಿವಾಸಮೂರ್ತಿ, ಡಿ.ಒ. ಕರಿಬಸಪ್ಪ ಮಾತನಾಡಿದರು.
ತಹಶೀಲ್ದಾರ್ ಟಿ. ಜಗದೀಶ್, ಮುಖಂಡರಾದ ಕೊಂಡಾಪುರ ಪರಮೇಶ್ವರಪ್ಪ, ಡಿ.ಒ. ಮೊರಾರ್ಜಿ, ದಡಗೂರು ಮಂಜುನಾಥ, ಕೆ.ಎಸ್. ಸಣ್ಣಯಲ್ಲಪ್ಪ, ಬಡೋಬನಾಯಕ, ಎಸ್. ಪರಮೇಶ್, ಯರ್ಜೇನಹಳ್ಳಿ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.