ಮೊಳಕಾಲ್ಮುರು: ತಾಲ್ಲೂಕಿನ ಬಿ.ಜಿ.ಕೆರೆಯ ಬಸ್ ನಿಲ್ದಾಣದಲ್ಲಿ ವಿದ್ಯುತ್ ಕಂಬದಿಂದ ತಂತಿಗಳು ಜೋತು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಆತಂಕ ಎದುರಾಗಿದೆ.
ಹೆದ್ದಾರಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಕಂಬದಿಂದ ಹೈಮಾಸ್ಟ್ ದೀಪ ಹಾಗೂ ಅಂಗಡಿಗಳಿಗೆ ಸಂಪರ್ಕ ನೀಡಿದ್ದ ತಂತಿಗಳು ಕಡಿತವಾಗಿ ಜೋತು ಬಿದ್ದಿವೆ. ಇದರ ಕೆಳಗಡೆ ಕಬ್ಬಿಣ ತಗಡಿನ ಗೂಡಂಗಡಿಗಳು ಇದ್ದು ವಿದ್ಯುತ್ ಪ್ರವಹಿಸುವ ಸಾಧ್ಯತೆ ಹೆಚ್ಚಿದೆ. ಮಳೆಗಾಲವಾಗಿರುವ ಕಾರಣ ಇಲ್ಲಿ ನಿಂತು ಬಸ್‌ಗೆ ಕಾಯುವವರಿಗೆ ಅನಾಹುತದ ಆತಂಕ ಕಾಡುತ್ತಿದೆ.
‘ತಂತಿಗಳು 5 ವರ್ಷಗಳಿಂದ ಜೋತಾಡುತ್ತಿವೆ. ಹಲವು ಬಾರಿ ಬೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ವಿದ್ಯುತ್ ಅವಘಡ ಜಾಗೃತಿ ಮಾಸಾಚರಣೆ ಜಾಥಾ ಇದೇ ಹಾದಿಯಲ್ಲಿ ಈಚೆಗೆ ಸಾಗಿತು. ಇದು ಸಿಬ್ಬಂದಿ ಕಣ್ಣಿಗೆ ಬೀಳದಿರುವುದು ವಿಪರ್ಯಾಸ’ ಎಂದು ಅಂಗಡಿ ಮಾಲೀಕರೊಬ್ಬರು ಟೀಕಿಸಿದರು.
‘ಸಮಸ್ಯೆ ಗಮನಕ್ಕೆ ಬಂದಿದೆ. ದುರಸ್ತಿ ಮಾಡಿಸಲು ಬೇಕಿರುವ ತಂತಿ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಕೊಡಿಸಲ್ಲ, ನಮ್ಮ ಬಳಿಯೂ ಇಲ್ಲ. ತಂತಿ ವ್ಯವಸ್ಥೆ ಮಾಡಿಕೊಂಡು ಶೀಘ್ರ ದುರಸ್ತಿ ಮಾಡಿಸಲಾಗುವುದು’ ಎಂಬ ಹಾರಿಕೆ ಉತ್ತರವನ್ನು ಬೆಸ್ಕಾಂ ಅಧಿಕಾರಿಯೊಬ್ಬರು ಪತ್ರಿಕೆಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.