
ಮೊಳಕಾಲ್ಮುರು: ಪಟ್ಟಣ ಸೇರಿ ತಾಲ್ಲೂಕಿನ 33 ಗ್ರಾಮಗಳ ಆರಾಧ್ಯದೈವ, ಬುಡಕಟ್ಟು ಸಂಸ್ಕೃತಿಗಳ ಒಡೆಯ ನುಂಕಿಮಲೆ ಸಿದ್ದೇಶ್ವರನ ತ್ರೈವಾರ್ಷಿಕ ಜಾತ್ರೆಗೆ ಪಟ್ಟಣವು ನವ ವಧುವಿನಂತೆ ಸಿದ್ಧವಾಗಿದೆ.
ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಮುಖಂಡರು ದೇವರನ್ನು ಹೂವಿನ ಅಪ್ಪಣೆ ಕೇಳುವ ಮೂಲಕ ದಿನ ನಿಗದಿಪಡಿಸುತ್ತಾರೆ. ಇದರಂತೆ ಡಿ. 8ರಂದು ಬೆಟ್ಟದಲ್ಲಿರುವ ನುಂಕಿಮಲೆ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಸ್ವಾಮಿ ಅನುಮತಿ ಪಡೆದು ಜಾತ್ರೆ ನಿಗದಿ ಮಾಡಲಾಗಿತ್ತು. ದಕ್ಷಿಣ ಕಾಶಿ ಎಂದು ಹೆಸರಾಗಿರುವ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ.
ಕಾರ್ಯಕ್ರಮಗಳು: ಫೆ. 1ರಂದು ಬೆಟ್ಟಕ್ಕೆ ತೆರಳಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣಕ್ಕೆ ಕರೆ ತರಲಾಗುವುದು. ನಂತರ ಹಾನಗಲ್ ರಸ್ತೆಯ ನುಂಕಿಮಲೆ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆಯು ಮುಖ್ಯ ಬೀದಿಗಳಲ್ಲಿ ನಡೆಯಲಿದೆ. ಬಳಿಕ ಕೋಟೆ ಬಡಾವಣೆಯಲ್ಲಿರುವ ಸ್ವಾಮಿ ಕಟ್ಟೆ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು. ಜೊತೆಗೆ ಅನ್ನಸಂತರ್ಪಣೆಯೂ ನಡೆಯಲಿದೆ.
ಫೆ. 2ರಂದು ಬೆಳಗಿನ ಜಾವ ಸಮೀಪದ ಬೆಟ್ಟದಲ್ಲಿರುವ ಕಂಪಳರಂಗ ಹೊಂಡಕ್ಕೆ ಸ್ವಾಮಿಯನ್ನು ಗಂಗಾಪೂಜೆಗೆ ಕರೆದುಕೊಂಡು ಹೋಗಲಾಗುವುದು. ಮಧ್ಯಾಹ್ನದ ವೇಳೆಗೆ ಸ್ವಾಮಿ ವಾಪಸ್ ಬರಲಿದ್ದು, ಸ್ವಾಗತ ಕೋರಿ ಕಟ್ಟೆ ಮೇಲೆ ಪ್ರತಿಷ್ಠಾಪನೆ ಮಾಡಿದ ನಂತರ ಪಟ್ಟಣ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಬಂದು ದರ್ಶನ ಪಡೆಯಲಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳು, ಬೀದಿನಾಟಕ ಪ್ರದರ್ಶನ, ಯಕ್ಷಗಾನ ಪ್ರದರ್ಶನ, ಸಾಮಾಜಿಕ, ಪೌರಾಣಿಕ ನಾಟಕಗಳ ಪ್ರದರ್ಶನ, ಕೋಲಾಟ ಹಮ್ಮಿಕೊಳ್ಳಲಾಗಿದೆ.
ಫೆ. 4ರಂದು ಬೆಳಿಗ್ಗೆ ಮಹಾಮಂಗಳಾರತಿ ನಂತರ ಸ್ವಾಮಿ ಕಟ್ಟೆಯಿಂದ ಮೇಲೇಳುವನು. ಪದ್ಧತಿಯಂತೆ ದೊಡ್ಡಪೇಟೆ ರಸ್ತೆಯಲ್ಲಿರುವ ಕೆಲ ಮನೆಗಳ ಕಟ್ಟೆ ಮೇಲೆ ಕುಳಿತ ನಂತರ ಮಧ್ಯಾಹ್ನ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಬೀದಿದೀಪ ಸೇರಿ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿನ್ನೆಲೆ: ಸಾವಿರಾರು ವರ್ಷಗಳ ಹಿಂದೆ ನುಂಕಿಮಲೆ ಬೆಟ್ಟದಲ್ಲಿ ನುಂಕವ್ವ ಮಲಿಯವ್ವ ಎಂಬ ರಾಕ್ಷಸಿಯರು ಇದ್ದರಂತೆ. ಇವರ ಉಪಟಳಕ್ಕೆ ಜನರು ರೋಸಿ ಸಿದ್ದೇಶ್ವರ ಸ್ವಾಮಿ ಮೊರೆ ಹೋದರಂತೆ. ಭಕ್ತರ ಮನವಿಗೆ ಸ್ಪಂದಿಸಿ ರಕ್ಕಸಿಯರ ಸಂಹಾರಕ್ಕಾಗಿ ಕುದುರೆ ಮೇಲೆ ಸ್ವಾಮಿ ಬರುವಾಗ ಲಾಳ ಹರಿದು ಹೋಯಿಯಂತೆ. ಇದನ್ನು ಕಂಡ ಭಕ್ತ ಹರಳಯ್ಯ ತನ್ನ ಕಾಲಿನ ನರವನ್ನು ಕಿತ್ತು ಲಾಳ ಮಾಡಿಕೊಟ್ಟನಂತೆ. ಇದಕ್ಕೆ ಮೆಚ್ಚಿದ ಸಿದ್ದೇಶ್ವರ ಸ್ವಾಮಿ ‘ಮುಂದೆ ಬೆಟ್ಟದಲ್ಲಿ ನನಗೆ ಪೂಜೆ ಸಲ್ಲುವ ಮುನ್ನ ನಿನಗೆ ಪೂಜೆ ಸಲ್ಲಬೇಕು’ ಎಂಬ ವರ ನೀಡಿದನಂತೆ. ಇದರಂತೆ ಈಗಲೂ ಹರಳಯ್ಯ ಸ್ವಾಮಿಗೆ ಪ್ರಥಮ ಪೂಜೆ ಮಾಡಲಾಗುತ್ತದೆ. ರಾಕ್ಷಸಿಯರ ಸಂಹಾರದ ನಂತರ ಬೆಟ್ಟದಲ್ಲಿ ಸ್ವಾಮಿ ನೆಲೆಸಿದನು ಎಂಬ ಐತಿಹ್ಯವಿದೆ. ಪುರಾತನ ಕಾಲದ ಕುರುಹುಗಳು ಶಿಲಾಯುಗ ಅವಧಿಯ ಅವಶೇಷಗಳು ಮೌರ್ಯರ ಆಳಿತದ ಅನೇಕ ಸಾಕ್ಷಿಗಳನ್ನು ಬೆಟ್ಟದಲ್ಲಿ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.