ಮೊಳಕಾಲ್ಮುರು: ರೋಗ ರುಜಿನಗಳನ್ನು ನಿವಾರಿಸುವ ದೇವಿ, ‘ಮಧ್ಯಾಹ್ನ ಮಾರಿ’ ಖ್ಯಾತಿಯ ಗೌರಸಂದ್ರ ಮಾರಮ್ಮನ ವಾರ್ಷಿಕ ಜಾತ್ರೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ತಳಕು ಹೋಬಳಿಯ ಗೌರಸಮುದ್ರದಲ್ಲಿ ಮತ್ತು ಜಾತ್ರೆ ನಡೆಯುವ ಸಮೀಪದ ತುಂಬಲಿನಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರತಿವರ್ಷ ಆಷಾಢ ಮಾಸದ ಕೊನೆಯ, ಅಮವಾಸ್ಯೆ ನಂತರದ ಮಂಗಳವಾರ ದೇವಿಯ ದೊಡ್ಡ ಜಾತ್ರೆ ನಡೆಸಿಕೊಂಡು ಬರುವುದು ವಾಡಿಕೆ. ದೇವಿಯ ತವರು ಆಂಧ್ರಪ್ರದೇಶವಾಗಿರುವ ಜತೆಗೆ ಗೌರಸಮುದ್ರ ಆಂಧ್ರಗಡಿಯಲ್ಲಿರುವ ಕಾರಣಕ್ಕಾಗಿ ಈ ಜಾತ್ರೆಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರನ್ನು ಬೆಸೆಯುವ ಜಾತ್ರೆಯಾಗಿಯೂ ಖ್ಯಾತಿ ಪಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ತೆಲುಗು, ಕನ್ನಡ ಭಾಷಿಗರ ಜುಗಲ್‌ಬಂಧಿ ಜಾತ್ರೆ ಬೇರೆ ಎಲ್ಲೂ ಕಾಣಸಿಗುವುದಿಲ್ಲ.
ಜಾತ್ರೆಗೆ ಆ.12ರಂದು ಗ್ರಾಮಸ್ಥರು ಅನುಮತಿ ಕೇಳುವ ಮೂಲಕ ಚಾಲನೆ ನೀಡಲಾಗಿದೆ. ಅಂದು ರಾತ್ರಿ ಗ್ರಾಮದ ಸುತ್ತಲೂ ಸರಗ ಚೆಲ್ಲುವ ಕಾರ್ಯ ನಡೆದಿದೆ. ಸಗರ ಚೆಲ್ಲಿದ ನಂತರ ಜಾತ್ರೆವರೆಗೆ ಮನೆಯಲ್ಲಿ ಒಲೆ ಮೇಲೆ ಹೆಂಚು ಇಡುವಂತಿಲ್ಲ. ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ, ಗ್ರಾಮಸ್ಥರು ಕ್ಷೌರ ಮಾಡಿಸುವಂತಿಲ್ಲ, ಸ್ನಾನ ಮಾಡುವಂತಿಲ್ಲ ಎಂಬ ನಿಯಮಗಳಿದ್ದು, ಈಗಲೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿದೆ.
ನಾನಾ ಕಾರಣಕ್ಕಾಗಿ ದೇವಿಗೆ ಹರಕೆ ಹೊರುವುದು ವಾಡಿಕೆ, ಹರಕೆ ಹೊತ್ತವರು ತುಂಬಲಿನ ದೇವಸ್ಥಾನದ ಬಳಿ ಬೇವಿನ ಸೀರೆ ಹರಕೆ, ಬಾಯಿಗೆ ಬೀಗ, ದವಸ- ಧಾನ್ಯ ಅರ್ಪಣೆ, ಸೀರೆ ಅರ್ಪಣೆ ಮಾಡುತ್ತಾರೆ. ಪ್ರಾಣಿ ಬಲಿಯನ್ನು ದೇವಸ್ಥಾನದ ಬಳಿ ಮಾಡುವಂತಿಲ್ಲ. ಇದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಸಂಪರ್ಕ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪ್ರಾಣಿಬಲಿ ತಡೆಯಲಾಗುತ್ತಿದೆ.
ಆಂಧ್ರದ ನಿಡಗಲ್ಲು, ಮಾರಮ್ಮದೇವಿಯ ತವರು. ಭಕ್ತೆಯ ಕೋರಿಕೆ ಮೇರೆಗೆ ಗೌರಸಮುದ್ರಕ್ಕೆ ಬಂದು ನೆಲೆಸಿದಳು ಎನ್ನಲಾಗಿದೆ. ಪವಾಡಗಳ ಮೂಲಕ ಲೋಕಕಲ್ಯಾಣ ಮಾಡಿದ ಮಾರಮ್ಮ ಭಕ್ತರ ಕೋರಿಕೆಯಂತೆ ಇಲ್ಲಿಯೇ ನೆಲೆಸಿದಳು ಎಂಬ ಐತಿಹ್ಯವಿದೆ. ತುಂಬಲಿನ ಜಾತ್ರೆಗೆ ದೇವಿ ಉತ್ಸವ ಮೂರ್ತಿ ಹಾಗೂ ಆಭರಣಗಳನ್ನು ಬುಡಕಟ್ಟು ಸಂಸ್ಕೃತಿ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತರುತ್ತಾರೆ.
ದೇವಿ ಆಗಮನ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ. ಇದಾದ ತಕ್ಷಣವೇ ಜನರು ವಾಪಾಸ್ ಆಗುತ್ತಾರೆ. ಸಂಜೆ ಭಕ್ತರು ತುಂಬಲಿನಲ್ಲಿ ತಂಗುವಂತಿಲ್ಲ. ಹೀಗಾಗಿ ಈ ಜಾತ್ರೆಗೆ ‘ಮಧ್ಯಾಹ್ನ ಮಾರಿ ಜಾತ್ರೆ’ ಎಂಬ ಹೆಸರೂ ಬಂದಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಇಲ್ಲಿ ದೊಡ್ಡ ಜಾತ್ರೆ ನಡೆದ ನಂತರದ ಒಂದು ತಿಂಗಳವರೆಗೆ ಸುತ್ತಮುತ್ತಲ ಜಿಲ್ಲೆಗಳ ಗ್ರಾಮಗಳಲ್ಲಿ ಮಾರಮ್ಮದೇವಿ ಜಾತ್ರೆಯನ್ನು ಮಾಡುತ್ತಾರೆ. ಐದನೇ ಮಂಗಳವಾರದ ಮರಿಪರಿಷೆ ನಡೆಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.
‘ಗಣಪತಿ ಹಬ್ಬದ ಜತೆಯಲ್ಲಿಯೇ ಪ್ರತಿವರ್ಷ ಮಾರಮ್ಮ ಜಾತ್ರೆ ಬರುತ್ತದೆ. ಗ್ರಾಮದಲ್ಲಿ ಗಣಪತಿ ಹಬ್ಬ ಆಚರಣೆ ಮಾಡುವುದಿಲ್ಲ. ವ್ಯಾಪಾರಿಯೊಬ್ಬರು ಪರೀಕ್ಷೆ ಮಾಡಲೆಂದೇ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾರೀ ನಷ್ಟ ಅನುಭವಿಸಿದ್ದರು. ಅನಂತರ ಆಚರಣೆ ಕೈಬಿಟ್ಟರು’ ಎಂದು ವಕೀಲ ಚಂದ್ರಣ್ಣ ತಿಳಿಸಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮ
ಆ.24ರಂದು ಹುತ್ತಕ್ಕೆ ಹಾಲಿನ ಅಭಿಷೇಕ ನಡೆಸಲಾಗಿದೆ. ಆ.25ರಂದು ದೇವಿಯ ಮೂಲ ಸನ್ನಿಧಿಗೆ ಅಭಿಷೇಕ 26ರಂದು ತುಂಬಲಿನಲ್ಲಿ ದೇವಿ ದೊಡ್ಡ ಜಾತ್ರೆ ಆರಂಭವಾಗುತ್ತದೆ. ಬೆಳಿಗ್ಗೆ 10 ಗಂಟೆಯಿಂದ ದೇವಿಯು ಮೆರವಣಿಗೆ ಮೂಲಕ ತುಂಬಲಿಗೆ ತೆರಳಲಿದೆ. ರಾತ್ರಿ 8 ಗಂಟೆ ಸುಮಾರಿಗೆ ಗ್ರಾಮಕ್ಕೆ ವಾಪಾಸ್ ಆಗಲಿದ್ದು ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಆ.27 ರಂದು ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿ ದೇವಿಯ ಸಿಡಿ ಉತ್ಸವ ನಡೆಯಲಿದೆ. ಆ.28ರಂದು ಓಕಳಿ ಮಹಾಮಂಗಳಾರತಿ ಮೂಲಕ ದೇವರನ್ನು ಗುಡಿದುಂಬಿಸಲಾಗುವುದು. ಸೆ.23 ರಂದು ತುಂಬಲಿನಲ್ಲಿ ಮರಿಪರಿಷೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.