ಮೊಳಕಾಲ್ಮುರು: ವಿದ್ಯಾರ್ಥಿಗಳಿಗೆ ಪಿಯು ಅತ್ಯಂತ ಮಹತ್ವದ ಹಂತವಾಗಿದ್ದು, ಉಪನ್ಯಾಸಕರು ನಿರ್ಲಕ್ಷ್ಯ ಮಾಡದೇ ಬೋಧಿಸಬೇಕು ಎಂದು ಪಿಯು ಜಿಲ್ಲಾ ಉಪ ನಿರ್ದೇಶಕ ಕೆ. ತಿಮ್ಮಯ್ಯ ಹೇಳಿದರು.
ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ತಾಲ್ಲೂಕಿನ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಫಲಿತಾಂಶ ಸುಧಾರಣೆಗಾಗಿ ಇಲಾಖೆ ರೂಪಿಸಿರುವ ಕಾರ್ಯಕ್ರಮಗಳನ್ನು ತಪ್ಪದೆ ಕಾರ್ಯರೂಪಕ್ಕೆ ತರಬೇಕು. ನಿಗದಿತ ಅವಧಿಯೊಳಗೆ ವಿಷಯಗಳ ಬೋಧನೆ ಮಾಡಬೇಕು. ಮುಖ್ಯವಾಗಿ ಮನಃಸಾಕ್ಷಿ ಒಪ್ಪುವಂತೆ ಕೆಲಸ ಮಾಡಿದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದರು.
ಮೊಳಕಾಲ್ಮುರು ಆಂಧ್ರ ಗಡಿಯಲ್ಲಿದ್ದು, ಕೂಲಿ ಕಾರ್ಮಿಕ, ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಪಿಯುನಲ್ಲಿ ಉತ್ತಮ ಶಿಕ್ಷಣ ದೊರೆತರೆ ಜೀವನ ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇದರಲ್ಲಿ ಉಪನ್ಯಾಸಕರ ಪಾತ್ರ ಬಹುಮುಖ್ಯವಾಗಿದೆ ಎಂದು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಡಿ. ಗೋವಿಂದಪ್ಪ ಅಭಿಪ್ರಾಯಪಟ್ಟರು.
ಪ್ರಾಂಶುಪಾಲರಾದ ಯು. ತಿಮ್ಮಣ್ಣ, ಶಶಿಕಲಾ, ಮಂಜುನಾಥ ರೆಡ್ಡಿ, ತಿಪ್ಪೇಸ್ವಾಮಿ, ಉಪನ್ಯಾಸಕರಾದ ಬಿ.ಎನ್. ತಿಪ್ಪೇಸ್ವಾಮಿ, ರವಿಕುಮಾರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.